ಕರಾವಳಿ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಲಕ್ಷದೀಪೋತ್ಸವ ಆರಂಭ : ಸಂಜೆ ಉಜಿರೆಯಿಂದ 8ನೇ ವರ್ಷದ ಪಾದಯಾತ್ರೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.10: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಇಂದಿನಿಂದ (ಗುರುವಾರ)ಆರಂಭಗೊಳ್ಳಲಿದೆ.ಡಿ. 13 ಮತ್ತು 14 ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಇಂದಿನಿಂದ 5 ದಿನ ಅಂದರೆ ಡಿಸೆಂಬರ್ 14ರ ವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು, ಧರ್ಮಸ್ಥಳದ ದೇವಸ್ಥಾನ, ಬೀಡು, ವಸತಿಛತ್ರಗಳು, ಉದ್ಯಾನ, ಪ್ರವೇಶದ್ವಾರ, ಬಾಹುಬಲಿ ಬೆಟ್ಟವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಶ್ರೀಕ್ಷೇತ್ರ ಮದುಮಗಳಂತೆ ಅಲಂಕಾರಗೊಂಡಿದೆ.

ಸರ್ವಧರ್ಮ ಸಮನ್ವಯ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಗುರುವಾರ ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಆರಂಭಗೊಳ್ಳಲ್ಲಿರಿವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಸರ್ವಾಲಂಕೃತಗೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಯಶಸ್ವಿ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಕಲ ಸಿದ್ದತೆಗಳನ್ನು ನಡೆಸಲಾಗಿದೆ. ದೇವರು ಸವಾರಿ ಮಾಡುವ ರಥ ಬೀದಿ, ರಾಜ ಬೀದಿಗಳನ್ನು, ದೇವಸ್ಥಾನ, ಬೀಡು, ಅನ್ನಪೂರ್ಣ ಸೇರಿದಂತೆ ಕ್ಷೇತ್ರದಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

10ರಂದು ರಾತ್ರಿ 9ಕ್ಕೆ ಹೊಸಕಟ್ಟೆ ಉತ್ಸವ, 11ರಂದು ಕೆರೆಕಟ್ಟೆ ಉತ್ಸವ, 12ರಂದು ಲಲಿತೋದ್ಯಾನ ಉತ್ಸವ, 13ರಂದು ಕಂಚಿಮಾರುಕಟ್ಟೆ ಉತ್ಸವ, 14ರಂದು ಗೌರಿಮಾರುಕಟ್ಟೆ ಉತ್ಸವಗಳು ನಡೆಯಲಿವೆ. ದೀಪೋತ್ಸವ ಪ್ರಯುಕ್ತ 13 ಮತ್ತು 14ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳು, 15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮಗಳಿರುತ್ತವೆ.

ಈ ಬಾರಿ ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಸರಳ ಕಾರ್ಯಕ್ರಮ ನಡೆಯಲಿದ್ದು, ಡಿ. 10ರಂದು ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭಗೊಂಡು, ಡಿ.14ರಂದು ಗೌರಿಮಾರುಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಕ್ಷೇತ್ರದಲ್ಲಿ ಕೊರೋನಾ ಹಿನ್ನಲೆಯಲ್ಲಿ ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಿಂದಲೂ ಸುರಕ್ಷತೆಯ ನಿಟ್ಟಿನಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಮಾಸ್ಕ್ ಕಡ್ಡಾಯ ಧಾರಣೆ ಮಾಡಬೇಕು ಸುರಕ್ಷತೆಯ ದೃಷ್ಟಿಯಿಂದ ಕ್ಷೇತ್ರದಿಂದ ವಿನಂತಿಸಲಾಗಿದೆ.

ಸರಕಾರದ ನಿಯಮದಂತೆ ಅಗತ್ಯ ಕ್ರಮಗಳೊಂದಿಗೆ ದೀಪೋತ್ಸವ ಸರಳವಾಗಿ ಆಚರಣೆಗೊಳ್ಳಲಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ವೀಕ್ಷಣೆ ಮಾಡಲು ಅವಕಾಶವಿದೆ.

ಯುಟ್ಯೂಬ್ ಮತ್ತು ಫೇಸ್‍ಬುಕ್‍ನ ಹಾಗೂ ಶ್ರೀಶಂಕರ ಟಿವಿಯಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮಗಳ ನೇರ ಪ್ರಸಾರ ನಡೆಯಲಿದೆ. ಈ ಬಾರಿ ವಸ್ತು ಪ್ರದರ್ಶನ ರದ್ದುಗೊಳಿಸಲಾಗಿದೆ. ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು ನೋಡಬೇಕು ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಈ ಹಿಂದೆಯೇ ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.

ಡಿ.13 ರಂದು ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. 14ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಹಿರಿಯ ವಿದ್ವಾಂಸ ಡಾ.ಎಸ್ ರಂಗನಾಥ್ ಉದ್ಘಾಟಿಸಲಿದ್ದು, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರಿ ಸಮಿತಿ ವತಿಯಿಂದ ಗುರುವಾರ ಸಂಜೆ ಉಜಿರೆಯಿಂದ ಧರ್ಮಸ್ಥಳದ ವರೆಗೆ 8ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಾಗವಹಿಸುವ ಪಾದಯಾತ್ರಿಗಳು ಸರಕಾರದ ಎಲ್ಲಾ ನಿಯಮಗಳನ್ನು ಕಡ್ಡಾಯ ವಾಗಿ ಪಾಲಿಸಬೇಕು ಎಂದು ಪಾದಯಾತ್ರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.