ಕರಾವಳಿ

ಮಾಜಿ ಶಾಸಕರ ನೇತೃತ್ವದಲ್ಲಿ ‘ಕುಂದಗನ್ನಡ’ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಜಿಲ್ಲೆ ರಚನೆಗೆ ಹೆಚ್ಚಿದ ಜನಬಲ, ಮಾಜಿ ಶಾಸಕರ ನೇತೃತ್ವದಲ್ಲಿ ಹೋರಾಟ ಸಮಿತಿ ಅಸ್ತಿತ್ವಕ್ಕೆ. ಹೊಸ ಜಿಲ್ಲೆಗೆ ಕುಂದಗನ್ನಡ ಜಿಲ್ಲೆ ಎನ್ನುವ ನಾಮಕರಣ. ಹಿಂದೆ ಜಿಲ್ಲೆಯಾಗುವ ಅವಕಾಶವಿದ್ದರೂ ತಪ್ಪಿದಕ್ಕೆ ಬೇಸರ.. ಜಿಲ್ಲೆ ಆಗಲೇ ಬೇಕು ಎನ್ನುವ ಬೇಡಿಕೆಗೆ ಹೆಚ್ಚಿದೆ ಸ್ವರ…

ಕಳೆದ ಹಲವಾರು ದಿನದಿಂದ ಕುಂದಾಪುರ ಜಿಲ್ಲೆ ಆಗಬೇಕು ಎನ್ನುವ ಹೋರಾಟಕ್ಕೆ ಮತ್ತಷ್ಟು ವೇಗ ಸಿಕ್ಕಿದ್ದು, ಇತ್ತೀಚೆಗೆ ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋರಾಟ ರೂಪುರೇಷೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಹೋರಾಟ ಸಮಿತಿ ರಚಿಸಲಾಯಿತು. ಕುಂದಗನ್ನಡ ಜಿಲ್ಲೆ ಸ್ಥಾಪನೆ ಕುರಿತು ಬೈಂದುರು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಕೂಡಾ ನಡೆಯಿತು.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ರ ನೇತೃತ್ವದಲ್ಲಿ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾಗಿ ಮುಂಬಾರು ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಜಿಪಂ ಮಾಜಿ ಸದಸ್ಯ ಗಣಪತಿ ಶ್ರೀಯಾನ್, ಉಪಾಧ್ಯಕ್ಷರಾಗಿ ದಸ್ತಗೀರಿ ಸಾಹೇಬ್ ಕಾವ್ರಾಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಎಂ. ನಾಯ್ಕ್ ನಾಡಗುಡ್ಡೆಯಂಗಡಿ, ನವೀನ ಚಂದ್ರ ಶೆಟ್ಟಿ ಬೆಳ್ಳೂರು, ರತ್ನಾಕರ ಶೆಟ್ಟಿ ಆವರ್ಸೆ, ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿನಯ ಶೇಟ್ ಕಾವ್ರಾಡಿ, ಕೆ. ಆರ್. ನಾಯ್ಕ್ ಹಂಗಳೂರು ಡಾ. ಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಹರ್ಕೂರು ಅವರ ಸಮೀತಿಗೆ ನೇಮಕ ಮಾಡಿಕೊಳ್ಳಲಾಯಿತು.

ಚಿಟ್ಟೆ ರಾಜಗೋಪಾಲ ಹೆಗ್ಡೆ ಮಾತನಾಡಿ, ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರ ಜತೆ ಈಗಾಗಲೇ 2-3 ಬಾರಿ ಮಾತನಾಡಿದ್ದು, ಭಟ್ಕಳ ತಾಲೂಕಿಗೆ ಜಿಲ್ಲಾ ಕೇಂದ್ರ ಕಾರವಾರ 178 ಕಿ. ಮೀ ದೂರವಿದೆ ಭಟ್ಕಳ ಜನತೆ, ಶಾಸಕರು ಭಟ್ಕಳವನ್ನು ಸೇರಿಸಿ ಕುಂದಾಪುರ ಜಿಲ್ಲೆ ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಸಂಚಾಲಕ ಮುಂಬಾರು ದಿನಕರ ಶೆಟ್ಟಿ ಮಾತನಾಡಿ, ಕುಂದಾಪುರ(ಕುಂದಗನ್ನಡ) ಜಿಲ್ಲೆ ರಚನೆಯಲ್ಲಿ ಕುಂದಾಪುರ ತಾಲೂಕು, ಬೈಂದೂರು ತಾಲೂಕು, ಪ್ರಸ್ತಾವಿಕ ಶಂಕರನಾರಾಯಣ ತಾಲೂಕು ಕೇಂದ್ರೀಕರಿಸಿ ಜಿಲ್ಲೆಗೆ ಹೋರಾಟ ಮಾಡಲಾಗುವುದು ಎಂದರು.

ಗಣಪತಿ ಶ್ರೀಯಾನ್ ದಸ್ತಗೀರಿ ಸಾಹೇಬ್, ನಾಡ ಸತೀಶ್ ನಾಯ್ಕ್, ಬಿ. ಅಪ್ಪಣ್ಣ ಹೆಗ್ಡೆ, ಅನಿಲ್ ಕುಮಾರ ಶೆಟ್ಟಿ ಕುಂದಾಪುರ ಜಿಲ್ಲೆ ರಚನೆ ಅನಿವಾರ್ಯ ಹಾಗೂ ಅಗತ್ಯದ ಕುರಿತು ಮಾತನಾಡಿದರು.

Comments are closed.