ಕರಾವಳಿ

ನಿರಾಶ್ರಿತರನ್ನು ಪತ್ತೆ ಹಚ್ಚಿ ನಿರ್ಗತಿಕ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಆಶ್ರಯ ನೀಡುವಂತೆ ಸೂಚನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 05 : ನಗರದಲ್ಲಿರುವ ನಿರ್ಗತಿಕ ಕೇಂದ್ರಗಳನ್ನು ಗುರುತಿಸಿ ನಿರಾಶ್ರಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಆಶ್ರಯ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ನಗರ ವ್ಯಾಪ್ತಿಯಲ್ಲಿ ನಿರಾಶ್ರಿತರಲ್ಲಿ ಮಲೇರಿಯಾ ಪ್ರಕರಣಗಳ ವರದಿ ಹಾಗೂ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತ ಸಭೆ ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.

ಮಹಾನಗರಪಾಲಿಕೆ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ತಂಡ ರಚನೆ ಮಾಡಿ, ಪ್ರತೀ ದಿನ ಒಂದೊಂದು ವಾರ್ಡ್‍ನಂತೆ ನಿರಾಶ್ರಿತರನ್ನು ಗುರುತಿಸಿ ವಾಹನದ ಮೂಲಕ ನಿರ್ಗತಿಕ ಕೇಂದ್ರಗಳಿಗೆ ತಲುಪಿಸಿ ಆಶ್ರಯ ನೀಡಬೇಕು. ರೋಗದ ಲಕ್ಷಣ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಅಂಗಡಿಗಳ ಸುತ್ತಮುತ್ತಲಿರುವ ನಿರುಪಯುಕ್ತ ಸಾಮಾಗ್ರಿಗಳಿಂದ ಸೊಳ್ಳೆ ಉತ್ಪತ್ತಿಯಾಗುತ್ತಿರುವುದು ಗಮನಕ್ಕೆ ಬಂದರೆ ದಾಖಲೆ ಸಹಿತ ವರದಿ ನೀಡಿ ಅಂತಹ ಅಂಗಡಿಗಳ ಟ್ರೇಡ್ ಲೈಸನ್ಸ್ ರದ್ದುಗೊಳಿಸಿಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಜಿಲ್ಲೆಯ ಎಲ್ಲಾ ತಹಶೀಲ್ದಾರರು ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಪ್ರತೀ ಮಾಹೆ ಪಿಂಚಣಿ ಪಾವತಿಯಾಗುತ್ತಿದೆಯೇ ಎಂಬುವುದನ್ನು ಪರಿಶೀಲಿಸಬೇಕು, ಬಾಕಿ ಇದ್ದರೆ ಅಂತವರ ಪಟ್ಟಿ ಮಾಡಿ ವರದಿ ನೀಡಬೇಕು ಎಂದ ಅವರು, ಜಿಲ್ಲೆಯ 6 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‍ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಿಶೇಷ ತಜ್ಞ ವೈದ್ಯರ ಶಿಬಿರವನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

ಎಂಡೋಸಂತ್ರಸ್ತರು ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ತಯಾರಿಸುವ ಪೇಪರ್ ಕವರ್ ಸೇರಿದಂತೆ ವಿವಿಧ ಕರಕುಶಲ ವಸ್ತುಗಳನ್ನು ಸಂಗ್ರಹಿಸಿ, ಆ ವಸ್ತುಗಳನ್ನು ಕಚೇರಿ ಕೆಲಸಗಳಿಗೆ ಉಪಯೋಗಿಸಿ ಕೌಶಲ್ಯವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಡಿ.ಎಚ್.ಓ. ರಾಮಚಂದ್ರ ಬಾಯರಿ ಮಾತನಾಡಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಈಗಾಗಲೇ ಗುರುತಿನ ಚೀಟಿ, ಪಾಲನಾ ಕೇಂದ್ರದ ಸೇವೆ (ಡೇ ಕೇರ್ ಸೆಂಟರ್), ವಿಶೇಷ ತಜ್ಞ ವೈದ್ಯರ ಶಿಬಿರದ ಸೇವೆ, ಸ್ಪೆಷಾಲಿಸ್ಟ್, ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆಗಳಲ್ಲಿ ಶುಲ್ಕರಹಿತ ಚಿಕಿತ್ಸೆ, ಔಷಧಿ ವಿತರಣೆ, ಉಚಿತ ಬಸ್‍ಪಾಸ್, ಸಂಚಾರಿ ಆರೋಗ್ಯ ಘಟಕದ ಸೇವೆ, ಫಿಸಿಯೋಥೆರಪಿ ಘಟಕದ ಸೇವೆ, ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದ ಅವರು, ಪ್ರಸ್ತುತ ದಿನಗಳಲ್ಲಿ ಕೊವೀಡ್-19 ನಿಮಿತ್ತ ಸಂತ್ರಸ್ತ ಮಕ್ಕಳು ಕೇಂದ್ರಕ್ಕೆ ಬರಲು ಅವಕಾಶವಿಲ್ಲದೇ ಇರುವುದರಿಂದ ಕೇಂದ್ರದ ಸಿಬ್ಬಂದಿಗಳ ಮೂಲಕ ಮನೆ ಭೇಟಿ ಮಾಡಿ ಸೇವೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಮಲೇರಿಯಾ ನಿಯಂತ್ರಣಾಧಿಕಾರಿ ನವೀನ್ ಚಂದ್ರ ಕುಲಾಲ್, ಸಾಮಾಜಿಕ ಭದ್ರತೆ ಸಹಾಯಕ ನಿರ್ದೇಶಕ ಎ.ಡಿ. ಬೋಪಯ್ಯ, ತಾಲೂಕು ವೈದ್ಯಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ತಹಶೀಲ್ದಾರರು ಹಾಗು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.