ಕರಾವಳಿ

ವೃದ್ಧಾಶ್ರಮ, ಅನಾಥಾಶ್ರಮದ ಸದಸ್ಯರೊಂದಿಗೆ ಸಾಫಲ್ಯ ಸೇವಾ ಸಂಘ ಮುಂಬೈ ವರ್ಷಾಚರಣೆ

Pinterest LinkedIn Tumblr

ಮುಂಬೈ : ಸಾಫಲ್ಯ ಸೇವಾ ಸಂಘವು ಸುಮಾರು 79 ವರ್ಷಗಳಿಂದ ಸಮಾಜಕ್ಕೆ ಪೂರಕವಾದಂತಹ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಾ ಬಂದಿದೆ.

ಕೊರೋನಾ ಎಂಬ ಮಹಾಮಾರಿಯ ಪ್ರಕೋಪಕ್ಕೆ ತುತ್ತಾಗಿ, ಏನೂ ಸಂಪಾದನೆ ಮಾಡಲು ಆಗದೆ  ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ವಿಪರೀತ ಪರಿಸ್ಥಿತಿಯಲ್ಲಿ ಇದ್ದಂತಹ 50 ಕುಟುಂಬಗಳನ್ನು ಗುರುತಿಸಿ ಅವರಿಗೆ ಒಂದು ತಿಂಗಳಿಗಾಗುವಷ್ಟು ಆಹಾರಧಾನ್ಯಗಳನ್ನು ಒದಗಿಸುವಂತಹ ಪುಣ್ಯಕರವಾದ ಕೆಲಸವನ್ನು ಸಾಫಲ್ಯ ಸೇವಾ ಸಂಘವು ಮಾಡಿದೆ.

ಮಹಾಮಾರಿಯಿಂದ ನಿರ್ಮಿಸಲ್ಪಟ್ಟ ಗೊಂದಲದ ವಾತಾವರಣದಲ್ಲಿ ದೇಶದಾದ್ಯಂತ ನಲುಗಿದ ತುಳು ಕನ್ನಡಿಗರ ನೀರಸ ಜೀವನದಲ್ಲಿ ನವಚೈತನ್ಯ ಮೂಡಲೆಂಬ ಸಧ್ಭಾವನೆಯಿಂದ ಪ್ರಪ್ರಥಮ ಬಾರಿಗೆ ಜಾಲತಾಣ/ಆನ್ ಲೈನ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಸಾಫಲ್ಯ ಸೇವಾ ಸಂಘಕ್ಕೆ ಸಲ್ಲುತ್ತದೆ. ಇದು ಅತ್ಯಂತ ಹೆಮ್ಮೆಯ ವಿಷಯ ಎಂದು ಗಿರಿಜಾ ವೆಲ್ ಫೇರ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ವಸಂತ್ ಕುಂಜಾರ್ ರವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ತ್ರೈಮಾಸಿಕ ಪತ್ರಿಕೆ *ಸಾಫಲ್ಯದ ಬೆಳ್ಳಿ ಹಬ್ಬದ* ಅಂಗವಾಗಿ ನಡೆಸಿದ ಕವನ,ಲೇಖನ, ಚಿತ್ರ ಕಲಾ ಸ್ಪರ್ಧೆ, ವರ್ಚುವಲ್ ಕಲಾಕ್ಷೇತ್ರ ನೃತ್ಯ ಸ್ಪರ್ಧೆ, ಸಂಸ್ಕೃತಿ ಮಹೋತ್ಸವ (ರಾಧಾ ಕೃಷ್ಣ ಸ್ಪರ್ಧೆ,ಆಟಿಯ ಒಂದು ದಿನ, ಗಣಪತಿ ಹಾಗೂ ರಾಖಿ ತಯಾರಿಸುವುದು), ಆರೋಗ್ಯ ವೇ ಭಾಗ್ಯ(ಆಕ್ಯುಪ್ರೆಷರ್ ಸೆಷನ್), ವಿದ್ಯಾರ್ಥಿಗಳ ಸಾಧನೆಗೆ ಗೌರವಧನ, ನಾದಸ್ವರ ದತ್ತು ಸ್ವೀಕಾರ (ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸದ ವಾರ್ಷಿಕ ವೆಚ್ಚ ಭರಿಸುವ ಯೋಜನೆ), ನಿಸ್ಸಹಾಯಕ ಪ್ರಾಣಿಗಳಿಗೆ ಆಹಾರ ಯೋಜನೆ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ಸುಸಜ್ಜಿತ ರೀತಿಯಲ್ಲಿ ಪರಿಚಯಿಸಿ, ದೇಶವಿದೇಶಗಳಲ್ಲಿ ಸುಮಾರು 2,500 ಜನರನ್ನು ಉತ್ಸಾಹದಿಂದ ಭಾಗವಹಿಸುವಂತೆ ಪ್ರೇರೇಪಿಸಿ, ಅವರೆಲ್ಲರ ಮೆಚ್ಚುಗೆಯನ್ನು ಗಳಿಸಿದ ಸಾಫಲ್ಯ ಸೇವಾ ಸಂಘದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದವರು ಸಂಘದ ಚಟುವಟಿಕೆಗಳ ಬಗ್ಗೆ ಶ್ಲಾಘನೆವ್ಯಕ್ತಪಡಿಸಿದರು.

ಕಳೆದ 3,4 ವರ್ಷಗಳಿಂದ ಖಾರ್ ಘರ್ ನ ಗಿರಿಜಾ ವೆಲ್ ಫೇರ್ ಎಂಬ ಸರ್ಕಾರೇತರ ಸಂಸ್ಥೆಯ ಜೊತೆಗೆ (NGO) ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿರುವಂತಹ ಸಾಫಲ್ಯ ಸಂಘವು ಕೋರೋನಾದ ಹಾವಳಿಯ ಈ ವಿಷಮ ಪರಿಸ್ಥಿತಿಯಲ್ಲೂ ಹೋದ ನವೆಂಬರ್ ತಿಂಗಳ 10ನೇ ತಾರೀಖಿನಂದು ಅಲ್ಲಿರುವ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ಭೇಟಿ ನೀಡಿ, ಕೊಡುಗೈ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಮಹತ್ತರವಾದ ಮೊತ್ತ ಹಾಗೂ ಉಪಯುಕ್ತವಾಗುವಂತಹ ಬಟ್ಟೆಬರೆಗಳನ್ನಷ್ಟೇ ಅಲ್ಲ, ಅದರೊಂದಿಗೆ ಸಿಹಿತಿಂಡಿಗಳನ್ನೂ ಹಂಚಿತ್ತು.

ಸಂಘದ ಗೌರವ ಕಾರ್ಯದರ್ಶಿ ಶ್ರೀ ಭಾಸ್ಕರ್ ಸಫಲಿಗ, ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀ ದೀಪಕ್ ಕುಂದರ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶೋಭಾ ಬಂಗೇರ, ಮಹಿಳಾ ವಿಭಾಗದ ಸಂಯೋಜಕಿ ಶ್ರೀಮತಿ ರತಿಕಾ ಸಾಫಲ್ಯ, ಹಾಗೂ ಯುವ ವಿಭಾಗದ ಅಧ್ಯಕ್ಷ ಶ್ರೀ ಪ್ರತೀಕ್ ಕರ್ಕೇರ ಇವರುಗಳು ಅತ್ಯಂತ ಮುತುವರ್ಜಿ ವಹಿಸಿ ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟಿದ್ದರು. ಈ ಭೇಟಿಯಿಂದ ಗಿರಿಜಾ ವೆಲ್ ಫೇರ್ ಸಂಸ್ಥೆಯಲ್ಲಿರುವ ಹಿರಿಯರು,ಕಿರಿಯರ ಮೊಗದಲ್ಲಿ ಮೂಡಿದ್ದ ಸಂತಸದ ನಗು, ನಿರ್ಮಾಣವಾದ ಖುಷಿಯ ವಾತಾವರಣವು ಅಲ್ಲಿಗೆ ಹೋಗಿದ್ದ ಎಲ್ಲಾ ಸದಸ್ಯರಿಗೂ ಅಮೂಲ್ಯ ಅನುಭವದೊಂದಿಗೆ ಒಂದು ರೀತಿಯ ಆತ್ಮತೃಪ್ತಿಯನ್ನೂ ನೀಡಿತ್ತು.

ಕೊರೋನಾ ದ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಹಾಯಹಸ್ತ ನೀಡಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸಿದ ಸಾಫಲ್ಯ ಸೇವಾ ಸಂಘಕ್ಕೆ ಗಿರಿಜಾ ವೆಲ್ ಫೇರ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ವಸಂತ್ ಕುಂಜಾರ್ ರವರು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಿದರು

ಹಲವಾರು ವರ್ಷಗಳಿಂದ ಸಮಾಜ ಬಾಂಧವರ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವ ಸಾಫಲ್ಯ ಸೇವಾ ಸಂಘವು ಅವರ ನೋವಿಗೆ,ನಲಿವಿಗೆ ಸದಾ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಸಂಘದ ಎಲ್ಲಾ ವಿಭಾಗಗಳು ನಿರಂತರವಾಗಿ ಪ್ರಯತ್ನಿಸುತ್ತಿರಬೇಕೆಂದು ಸಂಘದ ಗೌರವಾಧ್ಯಕ್ಷ ಶ್ರೀ ಶ್ರೀನಿವಾಸ ಸಾಪಲ್ಯರು ನುಡಿದರು.

ಕೊರೋನಾದ ಅವ್ಯಕ್ತ ಭಯದ ವಾತಾವರಣದಲ್ಲೂ ಸಂಘದ ಸಕಾರಾತ್ಮಕ ಚಟುವಟಿಕೆಗಳಿಗೆ ತನು,ಮನ,ಧನಗಳಿಂದ ಸಹಕರಿಸಿದ ಸಂಘದ ಎಲ್ಲಾ ಅಭಿಮಾನಿಗಳಿಗೆ,ಹಿತೈಷಿಗಳಿಗೆ ಈ ಪತ್ರಿಕೆಯ‌ ಮೂಲಕ ಸಾಫಲ್ಯ ಸೇವಾ ಸಂಘದ ಪರವಾಗಿ ಹೃತ್ಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದೂ ತಿಳಿಸಿದರು.

Comments are closed.