ಅಂತರಾಷ್ಟ್ರೀಯ

ಇನ್ಫೋಸಿಸ್ ನಾರಾಯಣ ಮೂರ್ತಿ ಪುತ್ರಿ ಬ್ರಿಟನ್ ರಾಣಿ​ಗಿಂತ ಶ್ರೀಮಂತೆ!

Pinterest LinkedIn Tumblr


ನವದೆಹಲಿ: ಇನ್ಫೋಸಿಸ್ ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಲಂಡನ್​ನಲ್ಲಿ ನೆಲೆಸಿದ್ದಾರೆ. ಅಕ್ಷತಾ ಬ್ರಿಟನ್​ನ ರಾಣಿಗಿಂತ ಶ್ರೀಮಂತೆಯಂತೆ! ತಮ್ಮ ಹೆಂಡತಿಯ ಆಸ್ತಿಯ ವಿವರವನ್ನು ಮುಚ್ಚಿಟ್ಟಿರುವ ಆರೋಪ ಎದುರಿಸುತ್ತಿರುವ ಬ್ರಿಟನ್ ಹಣಕಾಸು ಸಚಿವ ಮತ್ತು ಅಕ್ಷತಾ ಪತಿ ರಿಷಿ ಸುನಕ್ ಈಗ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಮತ್ತು ರಿಷಿ ಸುನಕ್ ಲಂಡನ್​ನಲ್ಲಿ ನೆಲೆಸಿದ್ದಾರೆ. ಬ್ರಿಟನ್​ನ ಹಣಕಾಸು ಸಚಿವರಾಗಿರುವ ರಿಷಿ ಸುನಕ್ ಅಲ್ಲಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಆಸ್ತಿ ವಿವರ ಸಲ್ಲಿಸುವಾಗ ಕೇವಲ ತಮ್ಮ ಆಸ್ತಿಯ ಬಗ್ಗೆ ಮಾತ್ರ ಮಾಹಿತಿ ನೀಡಿದ್ದರು. ಪತ್ನಿ ಅಕ್ಷತಾ ಅವರ ಆಸ್ತಿಯ ಬಗ್ಗೆ ಯಾವುದೇ ಉಲ್ಲೇಖವನ್ನೂ ಮಾಡಿರಲಿಲ್ಲ. ಆದರೆ, ಇಂಗ್ಲೆಂಡ್​ನ ನಿಯಮದ ಪ್ರಕಾರ ಅವರು ತಮ್ಮ ಹೆಂಡತಿ, ಅಪ್ಪ-ಅಮ್ಮ ಸೇರಿದಂತೆ ಎಲ್ಲ ಅವಲಂಬಿತರ ಆಸ್ತಿಯ ವಿವರವನ್ನೂ ನೀಡಬೇಕಾಗುತ್ತದೆ.

ದಿ ಗಾರ್ಡಿಯನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ರಿಷಿ ಸುನಕ್ ಅವರ ಹೆಂಡತಿ ಅಕ್ಷತಾ ಇನ್ಫೋಸಿಸ್​ ಸಂಸ್ಥೆಯಲ್ಲಿ ದೊಡ್ಡ ಪಾಲು ಹೊಂದಿದ್ದಾರೆ. ಇನ್ನೂ ಹಲವು ಕಂಪನಿಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅಕ್ಷತಾ ಅವರ ಒಟ್ಟಾರೆ ಆಸ್ತಿಯ ಮೌಲ್ಯ ರಾಣಿ ಎಲಿಜಬೆತ್ ಆಸ್ತಿಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದೆ. ಅಕ್ಷತಾ ಮೂರ್ತಿ ಇನ್ಫೋಸಿಸ್​ ಸಂಸ್ಥೆಯೊಂದರಲ್ಲೇ ಸುಮಾರು 4,200 ಕೋಟಿ ರೂ. ಮೌಲ್ಯದ ಷೇರನ್ನು ಹೊಂದಿದ್ದಾರೆ! ರಾಣಿ ಎಲಿಜಬೆತ್ ಅವರ ಆಸ್ತಿಯ ಮೌಲ್ಯ 3,400 ಕೋಟಿ ರೂ. ಎನ್ನಲಾಗಿದೆ. ಹೀಗಾಗಿ, ಅಕ್ಷತಾ ಮೂರ್ತಿ ರಾಣಿ ಎಲಿಜಬೆತ್​ ಅವರಿಗಿಂತಲೂ ಶ್ರೀಮಂತೆಯಾಗಿದ್ದು, ಈ ವಿಷಯವನ್ನು ರಿಷಿ ಸುನಕ್ ಆಸ್ತಿ ವಿವರದಲ್ಲಿ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಇದಿಷ್ಟೇ ಅಲ್ಲದೆ, ಅಕ್ಷತಾ ಇಂಗ್ಲೆಂಡ್​ನಲ್ಲಿ ಅಮೆಜಾನ್​ನಲ್ಲಿ 900 ಮಿಲಿಯನ್ ಪೌಂಡ್ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕೂಡ ಇಂಗ್ಲೆಂಡ್​ನ ಪತ್ರಿಕೆ ಬಹಿರಂಗಪಡಿಸಿದೆ. ಲಂಡನ್​ ಮೂಲದ ಗ್ಲೋಬಲ್ ಇನ್ವೆಸ್ಟ್​ಮೆಂಟ್​ ಫರ್ಮ್​ನ ಸಹ ಸಂಸ್ಥಾಪಕರಾಗಿರುವ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಕ್ಲಾಸ್​ಮೇಟ್​ ಆಗಿದ್ದವರು. 2009ರಲ್ಲಿ ಮದುವೆಯಾಗಿದ್ದ ಇವರಿಬ್ಬರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರು ಬ್ರಿಟನ್​ ಹಣಕಾಸು ಸಚಿವರಾಗಿದ್ದಾರೆ.

Comments are closed.