ರಾಷ್ಟ್ರೀಯ

ರಾಷ್ಟ್ರ ರಾಜಧಾನಿಯ ಗಡಿ ಪ್ರದೇಶಗಳಲ್ಲಿ ಮುಂದುವರಿದ ರೈತರ ಪ್ರತಿಭಟನೆ: ಡಿ. 8ಕ್ಕೆ ಭಾರತ್ ಬಂದ್ ಗೆ ಕರೆ

Pinterest LinkedIn Tumblr


ನವದೆಹಲಿ: ಹೊಸ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಶುಕ್ರವಾರವು ಮುಂದುವರಿಸಿದ್ದಾರೆ.

ಮೂವರು ಸಚಿವರು ಮತ್ತು ರೈತ ಪ್ರತಿನಿಧಿಗಳ ನಡುವೆ ಗುರುವಾರ ನಡೆದ ಮಾತುಕತೆ ವಿಫಲವಾದ ಕಾರಣ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರ ಪ್ರತಿನಿಧಿಗಳ ಗುಂಪಿನ ಸದಸ್ಯರು ಇಂದು ಸಭೆ ಸೇರಿ ಚರ್ಚಿಸಲಿದ್ದಾರೆ.

ಉತ್ತರಪ್ರದೇಶದ ರೈತರು ಯುಪಿ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಪಂಜಾಬ್‌ ಮತ್ತು ಹರಿಯಾಣದ ರೈತರು ದೆಹಲಿಯ ಇತರ ಗಡಿ ಭಾಗದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.

ರೈತರ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ಶನಿವಾರ ನಡೆಯಲಿದೆ. ಪ್ರತಿಭಟನೆ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿದೆ.

ಈ ಮಧ್ಯೆ ರಾಜಧಾನಿ ಪ್ರವೇಶಿಸುವವರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

 

ಡಿಸೆಂಬರ್ 8ರಂದು ರೈತಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ
ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 8(2020)ರಂದು ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಅಂದು ದಿಲ್ಲಿಯ ಎಲ್ಲಾ ಟೋಲ್ ಬೂತ್ ಹಾಗೂ ರಸ್ತೆಗಳನ್ನು ಬಂದ್ ಮಾಡುವುದಾಗಿ ಘೋಷಿಸಿವೆ.

ಡಿಸೆಂಬರ್ 5ರಂದು ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಲಾಗುವುದು. ಡಿ.8ರಂದು ಭಾರತ್ ಬಂದ್ ನಡೆಸುವುದಾಗಿ ಭಾರತ್ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಲಾಖೋವಾಲ್ ಸಿಂಘು ಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಈಡೇರಿಸದಿದ್ದರೆ, ರೈತರ ಹೋರಾಟ ದೀರ್ಘಕಾಲದವರೆಗೂ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿವೆ.

ಈಗಾಗಲೇ ಕಳೆದ 9ದಿನಗಳಿಂದ ದೆಹಲಿಯ ವಿವಿಧ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರದ ಜತೆ ಮೂರು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೇಂದ್ರ ಮತ್ತು ರೈತರ ನಡುವಿನ ಬಿಕ್ಕಟ್ಟು ಮುಂದುವರಿದಂತಾಗಿತ್ತು.

Comments are closed.