ಕರಾವಳಿ

ಬಿಜೆಪಿಯಿಂದ ಕಡಗಣನೆ ಆರೋಪ-ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಾನಕಿ ಬಿಲ್ಲವ..!

Pinterest LinkedIn Tumblr

ಕುಂದಾಪುರ: ಕಳೆದ 25 ವರ್ಷಗಳಿಂದ ಬಿಜೆಪಿ ಸಕ್ರೀಯ ಕಾರ್ಯಕರ್ತೆಯಾಗಿದ್ದು ಎರಡು ಬಾರಿ ತಾಲೂಕು ಪಂಚಾಯತ್ ಸದಸ್ಯೆಯಾಗಿ ಎರಡು ಬಾರಿ ಗ್ರಾಮಪಂಚಾಯತ್ ಸದಸ್ಯೆಯಾಗಿ ಬಳಿಕ ಅಧ್ಯಕ್ಷೆಯಾಗಿದ್ದ ಕೋಟೇಶ್ವರ ಭಾಗದ ಹಿರಿಯ ಬಿಜೆಪಿ ಮಹಿಳಾ ಮುಖಂಡರಾದ ಜಾನಕಿ ಬಿಲ್ಲವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ‌. ಗ್ರಾಮಪಂಚಾಯತ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಬಾರೀ ಕುತೂಹಲ ಕೆರಳಿಸಿದೆ.

ಗುರುವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೀಜಾಡಿ ನೇತೃತ್ವದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರೊಂದಿಗೆ ಸ್ಥಳೀಯ 20ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆಯಾಗಿದ್ದ ಜಾನಕಿ ಬಿಲ್ಲವರನ್ನು ಸ್ವಪಕ್ಷದವರೇ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅವರನ್ನು ಗಾದಿಯಿಂದ ಇಳಿಸಿದ್ದರು. ಆ ಬಳಿಕ ಜಾನಕಿ ಬಿಲ್ಲವ ಪಕ್ಷದ ಚಟಿವಟಿಕೆಯಿಂದ ದೂರ ಉಳಿದಿದ್ದರು. ಬಿಜೆಪಿಯಿಂದ ಕಡೆಗಣನೆ ಆಗಿದೆ. ನಿನ್ನೆ ಸಂಜೆಯವರೆಗೂ ನಾನು ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ನಂಬಿದವರಿಗೆ ಸಾಮಾಜಿಕ ನ್ಯಾಯ ಕೊಡಬೇಕು. ಅದಕ್ಕಾಗಿ ಒಂದು ಪಕ್ಷ ಬೇಕು ಎನ್ನುವ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವೆ ಎಂದು ಭಾವುಕರಾಗಿ ಜಾನಕಿ ಬಿಲ್ಲವ ಹೇಳಿದರು.

ಕೋಟೇಶ್ವರ ಭಾಗದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತೆಯಾಗಿದ್ದ ಜಾನಕಿ ಬಿಲ್ಲವ 1995 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ತಾಲೂಕು ಪಂಚಾಯತ್ ಸದಸ್ಯೆಯಾಗಿ 2 ಬಾರಿ, 2 ಬಾರಿ ಗ್ರಾ.ಪಂ ಸದಸ್ಯೆಯಾಗಿದ್ದು ಬೀಜಾಡಿ ಮೀನುಗಾರರ ಸೊಸೈಟಿಯಲ್ಲಿ ನಿರ್ದೇಶಕಿಯಾಗಿಯೂ ಇದ್ದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿಯೂ ಪಕ್ಷಕ್ಕಾಗಿ ಕೆಲಸ ಮಾಡಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ವಿಕಾಸ್ ಹೆಗ್ಡೆ, ಶಂಕರ್ ಪೂಜಾರಿ, ಸುನೀಲ್ ಪೂಜಾರಿ ಕೋಡಿ, ವಿನೋದ್ ಕ್ರಾಸ್ತಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Comments are closed.