ಕರಾವಳಿ

ಕೋವಿಡ್-19 ನಡುವೆ ನ. 30 ರಂದು ಕೋಟೇಶ್ವರ ಕೊಡಿಹಬ್ಬ: ಈ ಬಾರಿ ಆಚರಣೆ ಹೇಗಿರುತ್ತೆ ವಿವರ ಇಲ್ಲಿದೆ..

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಧ್ವಜಪುರ ಖ್ಯಾತಿಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ (ಕೊಡಿ ಹಬ್ಬ) ನ. 30 ಸೋಮವಾರ ನಡೆಯಲಿದ್ದು ಸರಕಾರದ ಕೋವಿಡ್-19 ಮಾರ್ಗಸೂಚಿಗಳಂತೆ ದೇವಸ್ಥಾನದ ಶಿಷ್ಠಾಚಾರ, ಪರಂಪರೆ ಹಾಗೂ ಧಾರ್ಮಿಕ ಸಂಪ್ರದಾಯಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ. ಭಕ್ತರ ಆರೋಗ್ಯ ಕಾಳಜಿಯಿಂದಾಗಿ ಸರಕಾರ ಹಾಗೂ ಜಿಲ್ಲಾಡಳಿತ ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಿದ್ದು ಭಕ್ತರು ಸಹಕಾರ ನೀಡಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

(ಸಂಗ್ರಹ ಚಿತ್ರಗಳು-2019)

ಆಚರಣೆ ಹೇಗಿರುತ್ತೆ…ಏನಿರುತ್ತೆ? ಏನಿರಲ್ಲ..?
* ಭಕ್ತಾಧಿಗಳ ಆರೋಗ್ಯದ ಸುರಕ್ಷತೆ ಹಿನ್ನೆಲೆ 65 ವರ್ಷದ ಮೇಲ್ಪಟ್ಟವರು 10 ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಮನೆಯಲ್ಲೇ ಉಳಿದು ಅಂತರ್ಜಾಲ ಮಾಧ್ಯಮದಲ್ಲಿ ಬಿತ್ತರಿಸುವ ನೇರಪ್ರಸಾರದಲ್ಲಿ ನೋಡಬೇಕಿದೆ.

* ರಥಬೀದಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಅವಕಾಶವಿಲ್ಲ. ಆದ್ದರಿಂದ ಹಣ್ಣುಕಾಯಿ ಸೇವೆ ಮಾಡಲು ಇಚ್ಚಿಸುವರು ಮನೆಯಿಂದಲೇ ಹಣ್ಣು ಕಾಯಿ ತಂದು ಸಮರ್ಪಿಸಲು ಅವಕಾಶವಿದೆ.

* ಜಾತ್ರೆಗೆ ಬರುವ ಭಕ್ತರು ಗುಂಪುಗುಂಪಾಗಿ ಸೇರಲು ಅವಕಾಶವಿಲ್ಲ. ದೇವಾಲಯ ಪ್ರವೇಶಿಸುವ ಪ್ರತಿಯೊಬ್ಬ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಮಾಸ್ಕ್ ಸರಿಯಾದ ರೀತಿಯಲ್ಲಿ ಧರಿಸಬೇಕು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು ಅದನ್ನು ಬಳಸಬೇಕು.

* ಆಗಮಿಸುವ ಭಕ್ತರು ನಿಗದಿತವಾಗಿ ಸೂಚಿಸಿದ ದ್ವಾರದ ಮೂಲಕ ಪ್ರವೇಶವಾಗಬೇಕು. ನಿಗದಿತ ಸ್ಥಳದಲ್ಲಿ ಸೇವೆಸಲ್ಲಿಸಿ ಒಳಸುತ್ತು ಪ್ರವೇಶಿಸಿ ದರ್ಶನ ಪಡೆದು ಹೊರಹೋಗಬೇಕಿದೆ.

* ಈ ಬಾರಿ ಅನ್ನಸಂತರ್ಪಣೆ ಇಲ್ಲ. ಅಲ್ಲದೇ ರಥೋತ್ಸವದಲ್ಲಿ ರಥಕ್ಕೆ ಸಲ್ಲಿಸುವ ಹಣ್ಣುಕಾಯಿ ಸೇವೆಗೆ ಅವಕಾಶವಿಲ್ಲ. ಕೋಟಿತೀರ್ಥದಲ್ಲಿ ತೀರ್ಥಸ್ನಾನ, ಸಂಪ್ರೋಕ್ಷಣೆಗೆ ಅವಕಾಶವಿಲ್ಲ.

* ರಥಾರೋಹಣ ಮತ್ತು ರಥಾವರೋಹಣ ಸಂದರ್ಭ ರಥ ಎಳೆಯಲು ಸೀಮಿತ ಮಂದಿಗೆ ಪಾಸ್ ನೀಡಿದ್ದು ಅವರು ಮಾತ್ರವೇ ಭಾಗವಹಿಸಲು ಅವಕಾಶವಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.