ಕುಂದಾಪುರ: ಅಂಬೇಡ್ಕರ್ ಜ್ಞಾನದ ಮೇರು ಪರ್ವತವಾದರೆ, ಸಂವಿಧಾನ ಭಾರತೀಯರ ಹೃದಯ ಗ್ರಂಥವಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅಂಬೇಡ್ಕರ್ ಜೀವನ ಹೋರಾಟದಿಂದ ಕೂಡಿದ್ದು, ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯ ನಿಭಾಯಿಸಲು ಸಾಧ್ಯ ಎಂದು ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಮತ್ತು ಕುಂದಾಪುರ ಬೈಂದೂರು ಮಹಿಳಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವದಲ್ಲಿ ಗುರುವಾರ ನಡೆದ ಭಾರತ ಸಂವಿಧಾನ ಅರ್ಪಣಾ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪುರದ ಖ್ಯಾತ ವಕೀಲ ರವಿಕಿರಣ್ ಮುರ್ಡೇಶ್ವರ್ ಮಾತನಾಡಿ, ಅಂಬೇಡ್ಕರ್ ಜೀವನದುದ್ದಕ್ಕೂ ಹೋರಾಟ ಮಾಡಿದರೂ ಕೂಡ ಅದು ಅವರ ವೈಯಕ್ತಿಕ ನೆಲೆಯಲ್ಲಾಗದೆ ಸಮಾಜದ ಸಮಷ್ಠಿಗಾಗಿ ಆಗಿತ್ತು. ಸಂವಿಧಾನ ಅರ್ಪಣಾ ದಿನಾ ಎಂದರೆ ನಮ್ಮನ್ನು ನಾವು ಸಂವಿಧಾನಕ್ಕೆ ಅಪರ್ಣೆ ಮಾಡಿಕೊಳ್ಳುವುದು ಎನ್ನೋದು ತಾತ್ಪರ್ಯವಾಗಿದೆ. ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಕರ್ತವ್ಯ ಮತ್ತು ಹಕ್ಕುಗಳ ಸರಿಯಾಗಿ ಅರ್ಥವಾಗುವ ಜೊತೆ ಸರಿ ಹಾದಿಯಲ್ಲಿ ಸಾಗಿಸಲು ಸಾಧ್ಯ. ತಿದ್ದುಪಡಿ ಮಾಡಲು ಅವಕಾಶ ಇರುವ ದೇಶದ ಮಹಾನ್ ಗ್ರಂಥ ಎಂದರೆ ಸಂವಿಧಾನ ಎಂದರು.
ದಲಿತ ಸಂಘರ್ಷ ಸಮಿತಿ ಕುಂದಾಪುರ ಸಮಿತಿ ಅಧ್ಯಕ್ಷ ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ಮತ್ತು ಬೈಂದೂರು ಮಹಿಳಾ ಒಕ್ಕೂಟ ಅಧ್ಯಕ್ಷೆ ಗೀತಾ ಸುರೇಶ್ ಕುಮಾರ್ ಇದ್ದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರ್ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ನಿರೂಪಿಸಿದರು. ಬೈಂದೂರು ತಾಲೂಕು ಸಮಿತಿ ಸಂಚಾಲಕ ಮಂಜುನಾಥ ನಾಗೂರು ವಂದಿಸಿದರು.
ವಾರಿಯರ್ಸ್’ಗಳಿಗೆ ಸನ್ಮಾನ..
ಸಂವಿಧಾನ ಅರ್ಪಣಾ ದಿನದಂದು ಕೊರೋನಾ ವಾರಿಯರ್ಸ್ ಆಗಿ ವಿವಿಧ ಕ್ಷೇತ್ರದಲ್ಲಿ ನಿಷ್ಠೆಯಿಂದು ಕೆಲಸ ಮಾಡಿದ ಸಾಧಕರ ಸನ್ಮಾನಿಸಲಾಯಿತು. ಕುಂದಾಪುರ ಕೋವಿಡ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಶ್, ಕುಂದಾಪುರ ಆರಕ್ಷಕ ಸಹಾಯಕ ಉಪನಿರೀಕ್ಷಕ ಅಶೋಕ್ ಖಾರ್ವಿ, ಕುಂದಾಪುರ ತಾಲೂಕ್ ಸರ್ಕಾರಿ ಆಸ್ಪತ್ರೆ ಸ್ಟಾಪ್ ನರ್ಸ್ಗಳಾದ ಶೋಭಾ ಕುಮಾರಿ, ಪ್ರಿಯಾಂಕ ಸುವರ್ಣ, ರೂಪಾ, ಕುಂದಾಪುರ ಪೌರ ಕಾರ್ಮಿಕ ಸಂಘ ಅಧ್ಯಕ್ಷ ನಾಗರಾಜ್ ಮತ್ತು ಬಳ್ಕೂರು ಆಶಾ ಕಾರ್ಯಕರ್ತೆ ಶ್ಯಾಮಲಾ ಅವರ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಗಣ್ಯರು ಸನ್ಮಾನಿಸಿದರು.