ಕುಂದಾಪುರ/ಉಡುಪಿ: ಖಾಸಗಿ ಬಸ್ಸಿನ ಕ್ಲೀನರ್ ಓರ್ವ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಸಾಬೀತಾಗಿದ್ದು ನ.30ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.
ಗುರು ಅಲಿಯಾಸ್ ಗುರುರಾಜ್ ಎಂಬಾತ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿಯಾಗಿದ್ದಾನೆ. 2014ರಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿ ಸರಹದ್ದಿನಲ್ಲಿ ಈ ಪ್ರಕರಣ ನಡೆದಿತ್ತು. 16 ವರ್ಷ ಪ್ರಾಯದ ಪ್ರಥಮ ಪಿಯು ವಿದ್ಯಾರ್ಥಿನಿ ಬಸ್ಸಿನಲ್ಲಿ ಕಾಲೇಜಿಗೆ ತೆರಳುವ ವೇಳೆ ಗುರುರಾಜ್ ಆಕೆಗೆ ಲೈಂಗಿಕ ಕಿರುಕುಳವೆಸಗಿದ್ದ. ಸಂಸ್ತಸ್ತ ಬಾಲಕಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 21 ಸಾಕ್ಷಿದಾರರಿದ್ದು ಅವರಲ್ಲಿ 11 ಮಂದಿ ಸಾಕ್ಷಿ ನುಡಿದಿದ್ದರು. ಸಂತ್ರಸ್ತೆಯ ಸಾಕ್ಷಿ ಸಹಿತ ಆರೋಪಿ ಮೇಲಿನ ಎಲ್ಲಾ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿ ಆತ ದೋಷಿ ಎಂದು ತೀರ್ಪು ನೀಡಿದೆ.
ಮೊದಲಿಗೆ ಕುಂದಾಪುರದಲ್ಲಿರುವ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು. ಬಳಿಕ ಪೋಕ್ಸೋ ನ್ಯಾಯಾಲಯ ಉಡುಪಿಗೆ ವರ್ಗಾವಣೆಯಾಗಿದ್ದು ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದಾರೆ.
(ವರದಿ-ಯೋಗೀಶ್ ಕುಂಭಾಸಿ)