ಮಂಗಳೂರು, ನವೆಂಬರ್. 24 : ಮಂಗಳೂರಿನಲ್ಲಿ ಮತ್ತೆ ತಲವಾರು ದಾಳಿ ಪ್ರಕರಣ ಮರುಕಳಿಸಿದ್ದು, ತಂಡವೊಂದು ಯುವಕನೊಬ್ಬನ ಮೇಲೆ ತಲ್ವಾರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆ ಸಮೀಪದಲ್ಲಿ ಸೋಮವಾರ ರಾತ್ರಿ ನಡೆದಿದೆ.
ನೌಶಾದ್ (30) ಎಂಬತಾನ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದೆ. ಕಾರಿನಲ್ಲಿ ಬಂದ ಗುಂಪು ನೌಶಾದ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದು, ದಾಳಿಯಿಂದ ಗಂಭೀರ ಗಾಯಗೊಂಡಿರುವ ನೌಶಾದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಗೊಳಗಾದ ನೌಶಾದ್ ಅವರು ಇತ್ತೀಚೆಗೆ ಕಂದಾವರ ಮಸೀದಿ ಸಮೀಪದಲ್ಲಿ ಮಸೀದಿ ಆಡಳಿತ ವಿಚಾರವಾಗಿ ಹಲ್ಲೆಗೊಳಗಾಗಿದ್ದ ಅಝೀಝ್ ಎಂಬವರ ಅಳಿಯನೆಂದು ತಿಳಿದುಬಂದಿದೆ.
ನವೆಂಬರ್ 15ರಂದು ಕಂದಾವರ ಮಸೀದಿ ಸಮೀಪ ರಾತ್ರಿ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಅಝೀಝ್ ಎಂಬವರ ಮೇಲೆ ದುಷ್ಕರ್ಮಿಗಳು ತಲಾವಾರು ದಾಳಿ ನಡೆಸಿ ಪರಾರಿಯಾಗಿದ್ದರು. ರಾತ್ರಿ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಅಬ್ದುಲ್ ಅಜೀಜ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಇಬ್ಬರು ಯುವಕರು ಇದ್ದಕ್ಕಿದ್ದಂತೆ ತಲವಾರಿನಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಅಬ್ದುಲ್ ಅವರ ತಲೆ, ಕೈ ಮತ್ತು ಕಾಲಿಗೆ ಗಾಯಗಳಾಗಿದ್ದವು, ಇದರ ಬೆನ್ನಲ್ಲೇ ಇದೀಗ ಮತ್ತೆ ಘಟನೆ ಮರುಕಳಿಸಿದೆ.
ದಾಳಿ ಯಾವ ಕಾರಣಕ್ಕೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದೇ ತಂಡ ಎರಡೂ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.