ಕರಾವಳಿ

1ಕೋಟಿ 80 ಲಕ್ಷ ಯುವಜನರಿಗಾಗಿ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ AIYF ಒತ್ತಾಯ

Pinterest LinkedIn Tumblr

ಮಂಗಳೂರು : ಅಖಿಲ ಭಾರತ ಯುವಜನ ಫೆಡರೇಷನ್ ವತಿಯಿಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸರಕಾರ ಧರ್ಮ, ಜಾತಿ, ಪ್ರದೇಶ ಆಧಾರದಲ್ಲಿ ಅನೇಕ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸುತ್ತಿದೆ. ಇಂತಹ ನಿಗಮಗಳಿಂದ ಸಮಾಜದ ಮೇಲ್ವರ್ಗದ ಕೆಲವರಿಗೆ ಮಾತ್ರ ಉಪಯೋಗವಾಗುತ್ತಿದ್ದು, ಮಧ್ಯಮ ಮತ್ತು ಕೆಳ ವರ್ಗದ ಯುವಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಆದ್ದರಿಂದ ಯುವಜನರ ಸಬಲೀಕರಣಕ್ಕೆ ಯುವಜನ ನಿಗಮ ಸ್ಥಾಪಿಸುವ ಅಗತ್ಯ ಇಂದು ಎದ್ದು ಕಾಣುತ್ತಿದೆ.

ಹಿಂದೆ 2013ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ‘ಸ್ವಾಮಿ ವಿವೇಕಾನಂದ ಯುವಜನ ಸಬಲೀಕರಣ ನಿಗಮ’ ವನ್ನು ಸ್ಥಾಪಿಸಲು ಮಂತ್ರಿಮಂಡಲ ಒಪ್ಪಿಗೆ ನೀಡಿತ್ತು. ನಂತರದಲ್ಲಿ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ನಮ್ಮ ರಾಜ್ಯದಲ್ಲಿ ಸುಮಾರು 1 ಕೋಟಿ 80 ಲಕ್ಷ ಯುವಜನರಿದ್ದಾರೆ. ಅವರೆಲ್ಲಾ ಸಬಲೀಕರಣಗೊಂಡರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್, ಮಂಗಳುರು ತಾಲೂಕು ಸಮಿತಿ ಮನವಿಯೊಂದನ್ನು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಅಖಿಲ ಭಾರತ ಯುವಜನ ಫೆಡರೇಷನ್ ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಪಿಲಿಲುಳ ಹಾಗೂ ಕೋಶಾಧಿಕಾರಿ ರಘು ಮಾಲೆಮಾರ್ ಭಾಗವಹಿಸಿದ್ದರು.

Comments are closed.