ಕರಾವಳಿ

ಬೀದಿ ಬದಿ ವ್ಯಾಪಾರಸ್ಥರಿಗೆ ಕಿರು ಸಾಲ ಯೋಜನೆ : ಸದುಪಯೋಗ ಪಡೆದುಕೊಳ್ಳುವಂತೆ ಮನವಿ

Pinterest LinkedIn Tumblr

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಆತ್ಮ ನಿರ್ಭರ್ ಭಾರತ್ ಯೋಜನೆಯ ಪ್ರಧಾನ ಮಂತ್ರಿ ಸ್ವನಿಧಿ ಅಡಿಯಲ್ಲಿ ನೀಡಲಾಗುತ್ತಿರುವ ಕಿರು ಸಾಲ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡಿದ್ದಾರೆ.

ಜಗತ್ತು ತತ್ತರಿಸಿರುವ‌ ಕೋವಿಡ್ – 19 ನಿಂದಾಗಿ ಜಾರಿಗೊಳಿಸಿದ ಲಾಕ್ ಡೌನ್ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿ ಕೇಂದ್ರ ಸರಕಾರದ ವಸತಿ ಹಾಗೂ ನಗರ ವ್ಯವಹಾರಗಳ ಮಂತ್ರಾಲಯವು ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಅಭಿವೃದ್ಧಿ ಹಾಗೂ ವ್ಯವಹಾರ ಪುನರ್ ಸ್ಥಾಪಿಸುವ ಸಲುವಾಗಿ ತುರ್ತು ಬಂಡವಾಳ ಒದಗಿಸುವ 10 ಸಾವಿರ ರೂಪಾಯಿ ಕಿರು ಸಾಲ‌ ಯೋಜನೆಗೆ ಚಾಲನೆ ನೀಡಿದೆ ಎಂದರು.

ಪರವಾನಗಿ ಇಲ್ಲದೆ ಜೀವನೋಪಾಯಕ್ಕಾಗಿ ಬೀದಿ ಬದಿಗಳಲ್ಲಿ ತರಕಾರಿ ಮಾರಾಟ ಮಾಡುವವರು, ಮೀನು ಮಾರಾಟಗಾರರು, ಹಣ್ಣು ಹಂಪಲು ಮಾರಾಟಗಾರರು, ಗೃಹ ಉತ್ಪನ್ನ ಮಾರಾಟಗಾರರು, ಚಹಾ ಗೂಡಂಗಡಿಗಳು, ಉತ್ಸವ ಇತ್ಯಾದಿಗಳಲ್ಲಿ ವ್ಯಾಪಾರ ಮಾಡುವವರು ಸೇರಿದಂತೆ ಅನೇಕರಿಗಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಸಾಲ ಪಡೆದುಕೊಳ್ಳುವವರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ರೇಷನ್ ಕಾರ್ಡ್/ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾದ ಪಾಸ್ ಬುಕ್ ಪುಸ್ತಕದ ಪ್ರತಿ, ಆಧಾರ್ ನಲ್ಲಿ ದಾಖಲಾದ ಮೊಬೈಲ್ ಸಂಖ್ಯೆ ಹಾಗೂ ಅರ್ಜಿಗಾರರು ಬೀದಿ ಬದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಭಾವಚಿತ್ರದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ ಡೇ-ನಲ್ಮ್ ಯೋಜನೆಯ ನಗರ ಅಭಿಯಾನ ನಿರ್ವಹಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ವ್ಯವಹಾರ ಅಧಿಕಾರಿ/ನಗರ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

Comments are closed.