ನವದೆಹಲಿ, ನವೆಂಬರ್ 18: ಸತತ ಮೂರು ದಿನಗಳಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರೀ ಇಳಿಕೆ ಕಂಡಿದ್ದು, ಚಿನ್ನಭರಣ ಪ್ರೀಯರಿಗೆ ಸಂತಷ ತಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಕುಸಿಯಲಾರಂಭಿಸಿದ್ದು, ಸತತ ಮೂರನೇ ದಿನವೂ ಚಿನ್ನ-ಬೆಳ್ಳಿ ಬೆಲೆ ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಇಂದು 10 ಗ್ರಾಂಗೆ ಶೇ. 0.43ರಷ್ಟು ಕುಸಿದು 50,546 ರೂಪಾಯಿಗೆ ತಲುಪಿದೆ. ಈ ಮೂಲಕ ಮೂರನೇ ದಿನ ಇಳಿಕೆಯತ್ತ ಮುಖ ಮಾಡಿದೆ.
ಮಂಗಳವಾರ ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ. ಆಭರಣ ಚಿನ್ನ 10 ಗ್ರಾಂಗೆ 100 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 47,600 ರೂಪಾಯಿ ಆಗಿದೆ. ಇನ್ನು ಶುದ್ಧ ಚಿನ್ನ 100 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ 51,930 ರೂಪಾಯಿ ಆಗಿದೆ.
ಬೆಳ್ಳಿ ದರದ ವಿಚಾರಕ್ಕೆ ಬರುವುದಾದರೆ ಕಳೆದವಾರ ಕೆಜಿ ಬೆಳ್ಳಿ 1,820 ರೂಪಾಯಿ ಇಳಿಕೆ ಕಂಡಿತ್ತು. ಸೋಮವಾರ ಬೆಳ್ಳಿ ಬೆಲೆ 890 ರೂಪಾಯಿ ಏರಿಕೆ ಕಂಡಿದ್ದು ಈ ಮೂಲಕ ಕೆಜಿ ಬೆಳ್ಳಿಗೆ 64,500 ರೂಪಾಯಿ ಆಗಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.
ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವೂ ಪ್ರತಿ ಕೆಜಿಗೆ ಶೇ. 0.6ರಷ್ಟು ಇಳಿದು, 62,875 ರೂಪಾಯಿಗೆ ತಲುಪಿದೆ. ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 1200 ಕುಸಿತ ಕಂಡಿತು. ಏಕೆಂದರೆ ಕೋವಿಡ್ ಲಸಿಕೆ ಬಗ್ಗೆ ಆಶಾವಾದವು ಜಾಗತಿಕವಾಗಿ ಅಪಾಯದ ಭಾವನೆಯನ್ನು ತೆಗೆದುಹಾಕಿತು ಮತ್ತು ಹಳದಿ ಲೋಹದ ಮೇಲೆ ಒತ್ತಡ ಹೇರಿತು. ಆಗಸ್ಟ್‌ನ ಗರಿಷ್ಠ, 56,200 ಕ್ಕೆ ಹೋಲಿಸಿದರೆ, ಚಿನ್ನದ ಬೆಲೆ ಈಗ ಸುಮಾರು 6,000 ರೂಪಾಯಿ ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ, ಕೊರೊನಾವೈರಸ್ ಪ್ರಕರಣಗಳು ವಿಶ್ವದ ಅನೇಕ ಭಾಗಗಳಲ್ಲಿ ಹೆಚ್ಚುತ್ತಿರುವಾಗಲೂ ಚಿನ್ನದ ದರಗಳು ಇಂದು ಕಡಿಮೆಯಾಗಿದೆ. ಚಿನ್ನ ಒಂದು ಔನ್ಸ್‌ಗೆ ಶೇ. 0.2ರಷ್ಟು ಕುಸಿದು 1,876.85 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ 24.47 ಡಾಲರ್‌ರಷ್ಟಿದ್ದರೆ, ಪ್ಲಾಟಿನಂ ಸ್ಥಿರವಾಗಿ 925.60 ಡಾಲರ್‌ನಷ್ಟಿತ್ತು.
ಇದೇ ವೇಳೆ ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗುವ ಸಂಭವ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.