ಕರಾವಳಿ

ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ್ ನಿಧಿ ಯೋಜನೆಯನ್ನು ತಲುಪಿಸುವಂತೆ ಸಂಸದ ಕಟೀಲ್ ಸೂಚನೆ

Pinterest LinkedIn Tumblr

ಮಂಗಳೂರು ನವೆಂಬರ್ 18 : ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯನ್ನು ಜನಪ್ರತಿನಿಧಿಗಳ ಸಹಕಾರದೊಂದಿಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಪುನಃಚ್ಛೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಿಎಂ-ಸ್ವನಿಧಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ರಸ್ತೆಯ ಅಕ್ಕಪಕ್ಕದಲ್ಲಿ ತಾತ್ಕಾಲಿಕ (ಶೆಡ್)ಅಂಗಡಿ ನಿರ್ಮಿಸಿ ವ್ಯಾಪಾರ ನಡೆಸುವ, ಗೂಡಂಗಡಿ, ತಳ್ಳುಗಾಡಿ, ಗೂಡ್ಸ್‍ಗಾಡಿಗಳಲ್ಲಿ ಚಿಕ್ಕ ಪುಟ್ಟ ಕ್ಯಾಂಟೀನ್, ಮನೆಯಲ್ಲಿ ಕ್ಯಾಂಟೀನ್ ನಡೆಸುವ ವ್ಯಾಪಾರಿಗಳು ಕೂಡ ತಮ್ಮ ವ್ಯಾಪಾರವನ್ನು ಮುಂದುವರಿಸಲು ಅವಶ್ಯಕವಿರುವ ತುರ್ತು ಬಂಡವಾಳಕ್ಕೆ ಈ ಯೋಜನೆಯ ಮೂಲಕ ನೆರವು ಪಡೆಯಬಹುದು ಎಂದರು.

ಬಂದರು ಪ್ರದೇಶಗಳಲ್ಲಿ ವಾರದ ಸಂತೆ, ಜಾತ್ರೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೀದಿವ್ಯಾಪಾರಿಗಳು ವ್ಯಾಪಾರ ನಡೆಸುತ್ತಾರೆ, ಅವರನ್ನು ಗುರುತಿಸಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಜಿಲ್ಲೆಯ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚಿನ ಒಲವು ತೋರಿಸಿ ನಿಗದಿತ ಕಾಲಮಿತಿಯೊಳಗೆ ಗುರಿ ಸಾಧಿಸಬೇಕೆಂದು ಎಂದು ಸೂಚಿಸಿದರು.

ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯಾತ್ರಿ ನಾಯಕ್ ಸಭೆಯಲ್ಲಿ ಪಿಎಂ ಸ್ವನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರ ಪುನರ್ ಪ್ರಾರಂಭಿಸಲು ಅಥವಾ ಮುಂದುವರಿಸಲು ರೂ. 10,000 ತುರ್ತುಬ್ಯಾಂಕ್ ಸಾಲವನ್ನು 7% ಬಡ್ಡಿ ಸಹಾಯಧನದೊಂದಿಗೆ ಒಂದು ವರ್ಷದ ಅವಧಿಯಲ್ಲಿ 12 ಮಾಸಿಕ ಕಂತುಗಳಲ್ಲಿ ಮರುಪಾವತಿಸಲು ಷರತ್ತಿನ ಮೇರೆಗೆ ಒದಗಿಸಲಾಗುತ್ತದೆ ಎಂದರು.

ಡಿಜಿಟಲ್ ವ್ಯವಹಾರಕ್ಕಾಗಿ ಮಾಸಿಕ ರೂ. 100, ಒಟ್ಟು ವಾರ್ಷಿಕ ರೂ 1,200 ಕ್ಯಾಶ್‍ಬ್ಯಾಕ್ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಮಾಹೆಯಾನ ನಿಗಧಿತ ಕಾಲದೊಳಗೆ ಸಾಲ ಮರುಪಾವತಿ ಮಾಡುವ ಫಲಾನುಭವಿಗಳಿಗೆ ಹೆಚ್ಚಿನ ಮೊತ್ತದ ಬ್ಯಾಂಕ್ ಸಾಲವನ್ನು ಒದಗಿಸುವ ಅವಕಾಶ ಮುಂದೆ ನೀಡಲಾಗುವುದು, ಜಿಲ್ಲೆಯಲ್ಲಿ ಒಟ್ಟು 7,792 ಗುರಿ ಇದ್ದು, ಈಗಾಗಲೇ 1,840 ಅರ್ಜಿಗಳನ್ನು ಅನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.