ಕರಾವಳಿ

ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀಯನ್ನು ವಿಚಾರಣೆ ನಡೆಸಿದ್ದ ಮಂಗಳೂರು ಸಿಸಿಬಿಯ ಇಬ್ಬರು ಅಧಿಕಾರಿಗಳ ವರ್ಗಾವಣೆ

Pinterest LinkedIn Tumblr

ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್   –   ಎಸೈ ಕಬ್ಬಳ್ ರಾಜ್     –     ಟಿವಿ ನಿರೂಪಕಿ ಅನುಶ್ರೀ

ಮಂಗಳೂರು: ಸ್ಯಾಂಡಲ್‌ವುಡ್ ಹಾಗೂ ಕೋಸ್ಟಲ್‌ವುಡ್ ನಲ್ಲಿ ಕೇಳಿ ಬಂದಿದ್ದ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ಮೂಲಕ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಮೂಲಕ ಖ್ಯಾತರಾಗಿದ್ದ ಮಂಗಳೂರಿನ ಸಿಸಿಬಿಯ ಇಬ್ಬರು ದಕ್ಷ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ಕೊರಿಯೋಗ್ರಾಫಾರ್ ಕಿಶೋರ್‍ ಅಮನ ಸಹಿತಾ ಹಲವರನ್ನು ಬಂಧಿಸಿ, ಸಿನಿಮಾ ನಟಿ, ಖ್ಯಾತ ಟಿವಿ ನಿರೂಪಕಿ ಅನುಶ್ರೀಯನ್ನು ಮಂಗಳೂರಿಗೆ ಕರೆಸಿ ವಿಚಾರಣೆ ನಡೆಸಿದ್ದ ಮಂಗಳೂರು ಸಿಸಿಬಿ ಇನ್ಸ್​​ಪೆಕ್ಟರ್ ಶಿವಪ್ರಕಾಶ್ ಹಾಗೂ ಎಸೈ ಕಬ್ಬಳ್ ರಾಜ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಡ್ರಗ್ಸ್ ಪ್ರಕರಣದ ತನಿಖೆಯ ವೇಳೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಯಲ್ಲಿ ಅನುಶ್ರೀ ಪಾತ್ರವಿದೆ ಎಂಬ ಮಾತು ಕೇಳಿ ಬಂದಿತ್ತು. ಮಾತ್ರವಲ್ಲದೇ ಅನುಶ್ರೀ ಮೊಬೈಲ್ ನಲ್ಲಿ ಮಂಗಳೂರಿನ ಹಾಗೂ ಬೆಂಗಳೂರಿನ ಖ್ಯಾತ ರಾಜಕಾರಾಣಿಗಳ ಜೊತೆ ಮಾತನಾಡಿರುವ ಡೇಟಾ ಪೊಲೀಸರಿಗೆ ಲಭಿಸಿತ್ತು.

ಈ ವಿಚಾರ ಹೊರ ಬರುತ್ತಿದ್ದಂತೆ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಅವರ ಜಾಗಕ್ಕೆ ಉಡುಪಿ ಜಿಲ್ಲೆಯ ಕಾಪು ಠಾಣೆಯ ಇನ್ಸ್​ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ನಿಯೋಜಿಸಲಾಗಿತ್ತು.

ಆದರೆ ಶಿವಪ್ರಕಾಶ್ ಅವರ ವರ್ಗಾವಣೆ ಬಗ್ಗೆ ಸಾರ್ವಜನಿಕ ಒತ್ತಡ ಕೇಳಿಬಂದ ಹಿನ್ನಲೆಯಲ್ಲಿ ವರ್ಗಾವಣೆ ತಡೆಹಿಡಿಯಲಾಗಿತ್ತು. ಇದೀಗ ಕೆಲವೇ ಸಮಯದ ಬಳಿಕ ಮತ್ತೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Comments are closed.