ಬೆಂಗಳೂರು: ಸ್ಯಾಂಡಲ್‌ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಕಾರ್ಯಾಚರಣೆ ಹಮ್ಮಿಕೊಂಡಿರುವ ಬೆಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಪೆಡ್ಲರ್‌ಗಳನ್ನು ನೈಜೀರಿಯಾದ ಹೆನ್ರಿ ಮತ್ತು ಮಾರ್ಕ್ ಎಂದು ಹೆಸರಿಸಲಾಗಿದ್ದು, ಬಂಧಿತರಿಂದ ಮೊಬೈಲ್ ಗಳು ಹಾಗೂ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 30ರಂದು ನೈಜೀರಿಯಾದ ಪೆಡ್ಲರ್ ಸನ್ನಿ ಎಂಬಾತನನ್ನು ಕೊಕೇನ್ ಸಹಿತಾ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈತ ಮಾರ್ಕ್ ಹಾಗೂ ಹೆನ್ರಿಯ ಬಗ್ಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟದಲ್ಲಿ ನಿರತರಾಗಿದ್ದ ಹೆನ್ರಿ ಮತ್ತು ಮಾರ್ಕ್ ಹೆಸರಿನ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಧಿತ ಆರೋಪಿಗಳಿಬ್ಬರು, ಹಲವು ವರ್ಷಗಳಿಂದ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಈ ಬಗ್ಗೆ ಕೂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.