ಕರಾವಳಿ

ನಾಳೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ : “ಸಹಕಾರಿ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ”

Pinterest LinkedIn Tumblr

ಮಂಗಳೂರು, ನವೆಂಬರ್.14: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ಸಹಕಾರಿ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ” ಎಂಬ ಧ್ಯೇಯದೊಂದಿಗೆ ಮಂಗಳೂರಿನಲ್ಲಿ ನ. 15ರಂದು ರಾಜ್ಯ ಮಟ್ಟದ ಸಹಾರ ಸಪ್ತಾಹವನ್ನು ಆಯೋಜಿಸಲಾಗಿದೆ.

ಈ ಬಗ್ಗೆ ಎಸ್‌ಸಿಡಿಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಂಗಳೂರಿನ ರಾಜ್ಯ ಮಟ್ಟದ ಈ ವಿಶೇಷ ಕಾರ್ಯಕ್ರಮವನ್ನು ಸಹಕಾರ ಸಚಿವ ಎಸ್‌ಟಿ. ಸೋಮಶೇಖರ್ ಉದ್ಘಾಟಿಸುವರು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಲಿ., ಮಂಗಳೂರು, ನವೋದಯ ಗ್ರ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ., ಮಂಗಳೂರು, ಸಹಕಾರ ಇಲಾಖೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಬ್ಯಾಂಕ್ ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳ ಸಹಯೋಗದೊಂದಿಗೆ ಈ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಸಕ್ತ ಸಾಲಿನ ಸಹಕಾರ ಸಪ್ತಾಹ ಕಾರ್ಯಕ್ರಮ ನ. 14ರಿಂದ 20ರವರೆಗೆ ಪ್ರಸಕ್ತ ಸಾಲಿನ ಸಪ್ತಾಹವನ್ನು ಕೊರೊನೋತ್ತರ ಸಹಕಾರ ಸಂಘ ಗಳ ಜವಾಬ್ಧಾರಿ ಮತ್ತು ಪಾತ್ರ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಳು ದಿನಗಳ ಕಾಲ ಕಾರ್ಯ ಕ್ರಮ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಬಿಜಾಪುರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಜನರಿಕ್ ಔಷಧಗಳನ್ನು ಸಹಕಾರ ಕ್ಷೇತ್ರದ ಮೂಲಕ ವಿತರಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ನವೆಂಬರ್ ೬ರಂದು ಕೇಂದ್ರ ಸಚಿವರಾದ ಮಾನ್ಯ ಶ್ರೀ ಡಿ.ವಿ. ಸದಾನಂದ ಗೌಡ ಇವರು ಈ ಯೋಜನೆಗೆ ಚಾಲನೆಯನ್ನು ನೀಡಿರುತ್ತಾರೆ.

ಸಹಕಾರ ಸಪ್ತಾಹ ಸಮಾರಂಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜನರಿಕ್ ಔಷಧಿಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ಪತ್ರವನ್ನು ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್‌ರವರು ಸಹಕಾರ ಸಂಘಗಳಿಗೆ ಹಸ್ತಾಂತರಿಸಲಿರುವರು.

ಸಹಕಾರ ಸಪ್ತಾಹ ಸಮಾರಂಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಐದು ಪ್ರಾಥಮಿಕ ಸಹಕಾರಿ ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ಔಷಧಿಗಳ ಮಾರಾಟ ಮಳಿಗೆ ತೆರೆಯಲು ಅನುಪತಿ ಪತ್ರವನ್ನು ವಿತರಿಸಲಾಗುವುದು. ಇದೇ ವೇಳೆ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯನಡೆಯಲಿದೆ.

ಕಾರ್ಯಕ್ರಮದಲ್ಲಿ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ಉತ್ತಮ ನವೋದಯ ಸ್ವ ಸಹಾಯ ಸಂಘಗಳಿಗೆ ಪುರಸ್ಕಾರ, ಸಹಕಾರ ಮಳಿಗೆ ಉದ್ಘಾಟನೆ ನಡೆಯಲಿದೆ ಎಂದು ಅವರು ಹೇಳಿದರು.

ಸಹಕಾರ ಜಾಥಾ :

ಉದ್ಘಾಟನಾ ಸಮಾರಂಭಕ್ಕೂ ಮೊದಲು ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಕಾರ್ಯಕ್ರಮ ನಡೆಯಲಿರುವ ಸಭಾಂಗಣದವರೆಗೆ ಸಹಕಾರ ಜಾಥಾ ನಡೆಯಲಿದೆ. “ಸಮುದಾಯದತ್ತ ಸಹಕಾರ ಜಾಥಾ” ಆಯೋಜನೆ ಮಾಡಲಾಗಿದ್ದು, ಪೂರ್ವಾಹ್ನ ೯.೩೦ ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಿಂದ ಟಿ.ವಿ.ರಮಣ ಪೈ ಸಭಾಂಗಣದವರೆಗೆ ಸರಳ ರೀತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ವಿಶೇಷ ಗಣ್ಯರು ಹಾಗೂ ಅಥಿತಿಗಳ ವಿವರ :

ಸಮಾರಂಭದ ಅಧ್ಯಕ್ಷತೆಯನ್ನು ಮಾನ್ಯ ಬಂದರು, ಮೀನುಗಾರಿಕೆ, ಮುಜರಾಯಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ವಹಿಸಲಿರುವರು.

“ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ”ವನ್ನು ಮಾನ್ಯ ಸಂಸದರಾದ ಸನ್ಮಾನ್ಯ ಶ್ರೀ ನಳಿನ್‌ಕುಮಾರ್ ಕಟೀಲು ಇವರು ನೆರವೇರಿಸಲಿದ್ದಾರೆ.

“ಸಹಕಾರ ಜಾಥಾ” ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ನೆರವೇರಿಸಲಿದ್ದಾರೆ.

ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವೇದವ್ಯಾಸ್ ಡಿ. ಕಾಮತ್ ಇವರು ನೆರವೇರಿಸಲಿರುವರು.

ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಇವರು ಬಿಡುಗಡೆ ಮಾಡಲಿರುವರು.

ಉತ್ತಮ ನವೋದಯ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಡಾ|ವೈ.ಭರತ್ ಶೆಟ್ಟಿ ಇವರು ನೆರವೇರಿಸಲಿರುವರು.

ಸಹಕಾರ ಮಳಿಗೆ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ದಿವಾಕರ್ ಪಾಂಡೇಶ್ವರ ಇವರು ನೆರವೇರಿಸಲಿರುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಷಡಕ್ಷರಿ, ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ಇದರ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಗ್ಡೆ ಕೊಡವೂರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳ ನಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ. ಸುವರ್ಣ, ಸ್ಕ್ಯಾಡ್ಸ್ ಅಧ್ಯಕ್ಷರಾದ ಶ್ರೀ ರವೀಂದ್ರ ಕಂಬಳಿ ಇವರು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಶ್ರೀ ತುಷಾರ್ ಗಿರಿನಾಥ್, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರಕಾರ, ಶ್ರೀ ಎಸ್. ಜಿಯಾವುಲ್ಲಾ, ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ಸರಕಾರ ಹಾಗೂ ಆಡಳಿತ ಅಧಿಕಾರಿ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು, ಡಾ|ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಶ್ರೀ ವಿಕಾಸ್ ಕುಮಾರ್ ವಿಕಾಶ್, ಪೊಲೀಸ್ ಕಮಿಷನರ್, ಮಂಗಳೂರು ಇವರು ಭಾಗವಹಿಸಲಿರುವರು. ದಿಕ್ಸೂಚಿ ಭಾಷಣವನ್ನು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಶ್ರೀ ಶಶಿಧರ್ ಎಲೆ ಇವರು ಮಾಡಲಿರುವರು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ವಿವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ದೇವಿ ಪ್ರಸಾದ್ ಶೆಟ್ಟಿ, ಅಶೋಕ್‌ಶೆಟ್ಟಿ, ಜಯರಾಂ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಸದಾಶಿವ ಉಳ್ಳಾಲ್, ಜಯರಾಜ್, ವಾದಿರಾಜ್ ಶೆಟ್ಟಿ, ಹರೀಶ್ ಆಚಾರ್ಯ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಕುಮಾರ್  ಮುಂತಾದವರು ಉಪಸ್ಥಿತರಿದ್ದರು.

Comments are closed.