ಕರಾವಳಿ

ಯಾವುದೇ ಅನುದಾನ ವಾಪಸ್ ಹೋಗದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸಿ: ಮೀನಾಕ್ಷಿ ಶಾಂತಿಗೋಡು

Pinterest LinkedIn Tumblr

ಮಂಗಳೂರು ನವೆಂಬರ್ 12 : ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು ನಿಗಧಿತ ಅವಧಿಯೊಳಗೆ ತಮಗೆ ನಿಗಧಿಪಡಿಸಿದ ಆರ್ಥಿಕ ಮತ್ತು ಬೌತಿಕ ಗುರಿಯನ್ನು ಸಂಪೂರ್ಣವಾಗಿ ಸಾಧಿಸುವಂತೆ ದ.ಕ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

ಅವರು ದ.ಕ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಎಲ್ಲಾ ಇಲಾಖೆಗಳು ತಮಗೆ ನೀಡಲಾದ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ತಿಳಿಸಿದ ಅವರು, ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿಯಲ್ಲಿ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಬಳಕೆಯಾಗಬೇಕು, ಯಾವುದೇ ಅನುದಾನ ವಾಪಸ್ ಹೋಗದಂತೆ ಎಚ್ಚರವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲೆಯ 40 ಅಂಗನವಾಡಿಗಳನ್ನು ಉನ್ನತೀಕರಣಗೊಳಿಸಲು 1 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಅದರಲ್ಲಿ ಈಗಾಗಲೇ 14 ಅಂಗನವಾಡಿಗಳ ಉನ್ನತೀಕರಣ ಪೂರ್ಣಗೊಂಡಿದ್ದು, ಬಾಕಿ ಅಂಗನವಾಡಿಗಳ ಉನ್ನತೀಕರಣ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.

ಬಂಡವಾಳ ಹೂಡಿಕೆಗೆ ಸಹಾಯಧನ ಯೋಜನೆಯಡಿ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳನ್ನು ಬ್ಯಾಂಕಿಗೆ ಕೂಡಲೇ ಕಳುಹಿಸಿ , ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ , ವಿವಿಧ ಸ್ವ ಉದ್ಯೋಗ ಮಾಡಲಿಚ್ಛಿಸುವ ಫಲಾನುಭವಿಗಳಿಗೆ ಶೀಘ್ರದಲ್ಲಿ ಸಾಲ ಮಂಜೂರಾತಿ ಮಾಡುವಂತೆ ಅಧ್ಯಕ್ಷರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ನಿರ್ರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್ ಮಾತನಾಡಿ ದಕ್ಷಿಣ ಕನ್ನಡದಲ್ಲಿ ಕೋವಿಡ್ ಪಾಸಿಟಿವ್ ಶೇ 2%ರಷ್ಟು ಕಡಿಮೆಯಾಗಿದ್ದು, ಕೋವಿಡ್‍ಗೆ ಲಸಿಕೆ ಸಿಗುವವರೆಗೂ , ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು , ಸ್ಯಾನಿಟೈಸ್ , ಮುಖಗವಸು ಧರಿಸಬೇಕು. ಜನರಲ್ಲಿ ಅರಿವನ್ನು ಮೂಡಿಸಲು ಜಾಥಾದಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಸರಕಾರಿ ಆಸ್ಪತ್ರೆಗಳಲ್ಲಿ ಅಂಬುಲೆನ್ಸ್‍ಗಳ ಕೊರತೆಯಿದ್ದು ಇದರ ಬಗ್ಗೆ ಗಮನಹರಿಸಲಾಗುವುದು , ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಇರುವ ಒಂದು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು , ಗರ್ಭಿಣಿಯಿಂದ ಹಿಡಿದು ನವಜಾತ ಶಿಶುವಿನವರೆಗೂ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆಂದು ಹೇಳಿದರು.

ಜಿಲ್ಲೆಯಲ್ಲಿ 71 ಸಾರ್ವಜನಿಕ ಶೌಚಾಲಯಗಳಿಗೆ ಅನುದಾನ ಬಿಡುಗಡೆಗೊಂಡಿದ್ದು 4 ಶೌಚಾಲಯಗಳು ಪ್ರಗತಿಯಲ್ಲಿದ್ದು ಉಳಿದೆಲ್ಲ ಶೌಚಾಲಯಗಳ ಕಾಮಗಾರಿಯು ಪೂರ್ಣಗೊಂಡಿದೆ , ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಚೇಳಾೈರು ಮತ್ತು ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾಗಿದ್ದು ಹೊಸ ನ್ಯಾಯಬೆಲೆ ಅಂಗಡಿ ನಡೆಸಲು ಕಾರ್ಪೋರೇಟ್ ಸೊಸೈಟಿಯನ್ನು ಆದಷ್ಟು ಬೇಗ ಹುಡುಕಿ ನ್ಯಾಯಬೆಲೆ ಅಂಗಡಿಯನ್ನು ನಡೆಸಿಕೊಂಡು ಹೋಗುವಂತೆ ಶೀಘ್ರವಾಗಿ ಜಾರಿಯಲ್ಲಿ ತರಬೇಕೆಂದರು.

ಅಂಗವಿಕಲರ ಕಾರ್ಡಿಗಾಗಿ ಈಗಾಗಲೇ ಎನ್.ಜಿ.ಒ ಸಂಸ್ಥೆಯ ಮೂಲಕ ಸೈಬರ್ ಕೇಂದ್ರಗಳು ಹಾಗೂ ಅಂಗವಿಕಲರ ಕಲ್ಯಾಣ ಕಛೇರಿಯಲ್ಲಿ ಮತ್ತು ಮಕ್ಕಳ ಕಾರ್ಡುಗಳನ್ನು ಶಾಲೆಗಳ ಮೂಲಕ ದಾಖಲೆ ಮಾಡಲು ಕ್ರಮವಹಿಸಲಾಗಿದೆ ಎಂದರು.

ಸಭೆಯಲ್ಲಿ ದ.ಕ ಜಿಲ್ಲಾಪಂಚಾಯತ್‍ನ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.