ಕುಂದಾಪುರ: ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಶನಿವಾರ ನಡೆದ ಗಲಾಟೆಯಲ್ಲಿ ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಬಾಟಲಿ ಹಾಗೂ ಚಪ್ಪಲಿ ತೂರಿದ್ದಲ್ಲದೆ ಅವ್ಯಾಚವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡೇರಿ ಮೀನುಗಾರಿಕಾ ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ನಡೆದ ಸಂಘರ್ಷ ಇದಾಗಿತ್ತು. ಶನಿವಾರ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಉಪ್ಪುಂದ ಮೀನುಗಾರರು ದಕ್ಕೆಗೆ ತೆರಳದಂತೆ ದೋಣಿ ಅಡ್ಡಗಟ್ಟಿದ ಕೊಡೇರಿ ಮೀನುಗಾರರು ಐದು ಗಂಟೆಗಳ ಕಾಲ ದೋಣಿ ತಡೆದಿದ್ದರು. ಬಳಿಕ ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ ಪೊಲೀಸರ ಸಮಕ್ಷಮ ಸ್ಥಳಕ್ಕೆ ತೆರಳಿ ಕೊಡೇರಿ ಭಾಗದವರ ಜೊತೆಗೆ ಮಾತುಕತೆಗೆ ಮುಂದಾದದರೂ ಕೂಡ ಅವರು ಅದಕ್ಕೆ ಒಪ್ಪಿರಲಿಲ್ಲ. ಸುಮಾರು 100 ರಿಂದ 200 ಜನರು ಅಕ್ರಮ ಕೂಟ ಸೇರಿಕೊಂಡು ಅನಾವಶ್ಯಕವಾಗಿ ಸರಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ್ದು, ನಂತರ ಎರಡೂ ಸಂಘಟನೆಗಳ ಮಧ್ಯೆ ಮಾರಾಮಾರಿ ಆಗುವ ಸಾಧ್ಯತೆಯೂ ಇತ್ತು. ಬಳಿಕ ಪೊಲೀಸರು ದೋಣಿಗಳನ್ನು ತಡೆದಿರುವ ಪ್ರತಿಭಟನಾಕಾರರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಚಪ್ಪಲಿ ಹಾಗೂ ವಾಟರ್ ಬಾಟಲ್ ಗಳನ್ನು ತೂರಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳದಲ್ಲಿ ಜೀವ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ಆಗುವ ನಷ್ಟವನ್ನು ತಡೆಗಟ್ಟಲು ಲಘು ಲಾಠಿ ಪ್ರಹಾರ ಕೂಡ ಮಾಡಲಾಗಿತ್ತು.
ಘಟನೆ ಸಂಬಂಧ ಈಗಾಗಾಲೇ 15 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 147, 148, 353, 504, 506,149 ಅಡಿ ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)