ಕರ್ನಾಟಕ

ಮಾದಕ ವಸ್ತು ಪ್ರಕರಣ : ಇಬ್ಬರು ಆರೋಪಿಗಳ ಜೊತೆ ಮಾಜಿ ಸಚಿವರ ಪುತ್ರನ ಬಂಧನ

Pinterest LinkedIn Tumblr

ಬೆಂಗಳೂರು, ನವೆಂಬರ್.09 : ಮಾದಕ ವಸ್ತು ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಪ್ರಕರಣ​ಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರ ಪುತ್ರನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಆರೋಪಗಳಿಗೆ ಸಹಾಯ ಮಾಡಿರುವ ಆರೋಪದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಸೇರಿದಂತೆ ಹೇಮಂತ್ ಮತ್ತು ಸುನೀಶ್ ಎಂಬಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರೂ ಆರೋಪಿಗಳು ಬಿಟ್ ಕಾಯುನ್ ಹಣ ಸಂದಾಯ ಮಾಡಿ ವಿದೇಶದಿಂದ 500 ಗ್ರಾಂ ಹೈಡ್ರೋ ಗಾಂಜಾವನ್ನು ತರಿಸಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ನವೆಂಬರ್ 5ರಂದು ಡ್ರಗ್ಸ್ ಪ್ರಕರಣ ಬಯಲಿಗೆ ಬಂದ ಬಳಿಕ ಬಂಧನ ಭೀತಿಯಿಂದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ..

ದರ್ಶನ್ ಲಮಾಣಿಯ ಡ್ರಗ್ಸ್ ಡೀಲಿಂಗ್ ಗಳ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ಸಿಕ್ಕಿದ್ದು ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ. ಡಾರ್ಕ್ ವೆಬ್ ಸೈಟ್​ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಜಾಡು ಹಿಡಿದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನವೆಂಬರ್ 4ರಂದು ದಾಳಿ ನಡೆಸಿದ್ದರು.

ನವೆಂಬರ್ 4ರಂದು ನಗರದ ಚಾಮರಾಜಪೇಟೆಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲ ಪೆಡ್ಲರ್​ಗಳು ವಿದೇಶದಿಂದ ಗಾಂಜಾ ತರಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ವಿದೇಶಿ ಅಂಚೆ ಕಚೇರಿಗೆ ಪಾರ್ಸಲ್​ನಲ್ಲಿ ಗಾಂಜಾ ತರಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ದಾಳಿ ವೇಳೆ ಸುಜಯ್ ಎಂಬುವ​ವನನ್ನು ಬಂಧಿಸಿ ಗಾಂಜಾ ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಸುಜಯ್ ಮತ್ತಿಬ್ಬರ ಬಗ್ಗೆ ಮಾಹಿತಿ ನೀಡಿದ್ದನಂತೆ. ಸಂಜಯ್ ಮಾಹಿತಿ ಮೇರೆಗೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ ಅಧಿಕಾರಿಗಳು ಗೋವಾದಲ್ಲಿ ಆರೋಪಿಗಳು ಇರುವ ಮಾಹಿತಿ ಆಧರಿಸಿ, ದಾಳಿ ನಡೆಸಿ ಗೋವಾದಲ್ಲಿ ಹೇಮಂತ್ ಹಾಗೂ ಸುನೀಶ್​ ಎಂಬ ಇಬ್ಬರನ್ನು ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ.

ಇವರ ಬಂಧನದ ವೇಳೆ ದರ್ಶನ್ ಲಮಾಣಿ ಸಹ ಜೊತೆಗಿದ್ದ. ದರ್ಶನ್ ಲಮಾಣಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಉನ್ನತ ಮಟ್ಟದ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Comments are closed.