ಕರಾವಳಿ

ಎಂಎಲ್‌ಐಎಸ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ನ.16 ಕೊನೆಯ ದಿನ – ವೃತ್ತಿಪರ ಕೋರ್ಸ್‌ನ ಸದುಪಯೋಗಪಡಿಸಿಕೊಳ್ಳಿ: ಡಾ.ಶಿವಲಿಂಗಯ್ಯ

Pinterest LinkedIn Tumblr

ಮಂಗಳೂರು: ಕೊಣಾಜೆ ಮಂಗಳಗಂಗೋತ್ರಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎರಡು ವರ್ಷದ ಮಾಸ್ಟರ್ ಆಫ್ ಲೈಬ್ರೆರಿ ಆಂಡ್ ಇನ್‌ಫಾರ್ಮೇಶನ್ ಸೈನ್ಸ್ (ಎಂಎಲ್‌ಐಎಸ್) ಸ್ನಾತಕೋತ್ತರ ಪದವಿ ಪಡೆಯ ಬಯಸುವ ವಿದ್ಯಾರ್ಥಿಗಳು ನ.16ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ವಿಭಾಗದ ಅಧ್ಯಕ್ಷ ಪ್ರೊಫೆಸರ್ ಡಾ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗೀಕೃತ ವಿಶ್ವವಿದ್ಯಾನಿಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಮತ್ತು ಪದವಿಯ ಅಂತಿಮ ವರ್ಷದ ಫಲಿತಾಂಶ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಬಹುದು. 38 ಸೀಟ್‌ಗಳು ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಈ ಕೋರ್ಸ್ ಪಡೆದವರಿಗೆ ಸಾಕಷ್ಟು ಉದ್ಯೋಗವಕಾಶಗಳೂ ಇವೆ. ಆದರೆ ಈ ಕೋರ್ಸ್‌ನ ಬಗ್ಗೆ ಹೆಚ್ಚಿನ ಮಂದಿಗೆ ಮಾಹಿತಿಯ ಕೊರತೆಯಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಸುಸಜ್ಜಿತವಾದ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ವೈಫೈ ಮತ್ತು ಅಂತರ್ಜಾಲದ ಸೌಲಭ್ಯ ಇದೆ. ಇದೊಂದು ವೃತ್ತಿಪರ ಕೋರ್ಸ್ ಆಗಿದ್ದು, ಗರಿಷ್ಠ ಪ್ರಮಾಣದ ಉದ್ಯೋಗವಕಾಶಗಳು ಇವೆ.

ಪರಿಷ್ಕೃತ ಮತ್ತು ನವೀಕರಿಸಿದ ಪಠ್ಯಕ್ರಮವನ್ನು ಒಳಗೊಂಡಿದೆ. ಹೆಚ್ಚಿನ ವಿಷಯಗಳು ಕಂಪ್ಯೂಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸಂಬಂಧಿಸಿದ್ದಾಗಿದೆ ಎಂದು ಡಾ.ಶಿವಲಿಂಗಯ್ಯ ವಿವರಿಸಿದರು.

ಈ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಬ್ರಿಟೀಷ್ ಲೈಬ್ರೆರಿ, ಬೆಂಗಳೂರು, ಮುಂಬೈ, ಇನ್ಫೋಸಿಸ್, ಅಹಮದಾಬಾದ್, ಆಸ್ಟ್ರೇಲಿಯಾ, ಸಿಂಗಾಪುರ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಡಾಕ್ಯುಮೆಂಟೇಷನ್ ಅಧಿಕಾರಿಗಳಾಗಿ, ವೈಜ್ಞಾನಿಕ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಬಹುತೇಕ ಮಂದಿ ಗ್ರಂಥಪಾಲಕರು, ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಈ ಕೋರ್ಸ್‌ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಡಾ.ಶಿವಲಿಂಗಯ್ಯ ತಿಳಿಸಿದರು.

ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗವು ಪ್ರಾರಂಭದಲ್ಲಿ 1982ರಿಂದ 1996ರವರೆಗೆ ಒಂದು ವರ್ಷದ ಬಿಎಲ್‌ಐಎಸ್‌ಸಿ ಕೋರ್ಸ್‌ನ್ನು ಮತ್ತು 1990ರಿಂದ 1997ರವರೆಗೆ ಒಂದು ವರ್ಷದ ಸ್ನಾತಕೋತ್ತರ ಎಂಎಲ್‌ಐಎಸ್‌ಸಿ ಕೋರ್ಸ ನ್ನು ಹಾಗೂ 1996ರಿಂದ ಎರಡು ವರ್ಷದ ಸ್ನಾತಕೋತ್ತರ ಎಂಎಲ್‌ಐಸ್‌ಸಿ ಕೋರ್ಸನ್ನು ಮತ್ತು ಪಿಎಚ್‌ಡಿ ಕೋರ್ಸನ್ನು ಪ್ರಾರಂಭಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕೋರ್ಸ್ ಪಡೆದು ಉನ್ನತ ಮಟ್ಟಕ್ಕೆ ಏರಿದ್ದಾರೆ. ಈ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದವರು ಹೇಳಿದರು.

ಕೋರ್ಸ್ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in ಅಥವಾ ವಿಭಾಗದ ದೂರವಾಣಿ ಸಂಖ್ಯೆ 0824-2287316, 9448358314೪, 6366274222 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಡಾ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

Comments are closed.