ಕರಾವಳಿ

ಮಸೀದಿಗಳ ಧ್ವನಿವರ್ಧಕ ತೆರವಿಗೆ ಪೊಲೀಸ್ ಮಹಾನಿರ್ದೇಶಕರ ಆದೇಶ…ಏನಿದು ಸುತ್ತೋಲೆ?

Pinterest LinkedIn Tumblr

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿರುವ ಧ್ವನಿ ವರ್ಧಕ ತೆರವುಗೊಳಿಸುವ ಕುರಿತು ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನವೆಂಬರ್ 2ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸುತ್ತೋಲೆ ರವಾನೆಯಾಗಿದ್ದು ಈ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಈ ಸುತ್ತೋಲೆಯನ್ನು ಕಳಿಸಲಾಗಿದೆ.

ಬೆಂಗಳೂರು ಮೂಲದ ವಕೀಲ ಹರ್ಷ ಮುತಾಲಿಕ್ ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿ ಈ ಸುತ್ತೋಲೆ ಕಳಿಸಲಾಗಿದೆ. 30/9/2020ರಂದು ವಕೀಲರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿಯೊಂದನ್ನು ಸಲ್ಲಿಕೆ ಮಾಡಿದ್ದರು.

ರಾಜ್ಯಾದ್ಯಂತ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳ ನಿಷೇಧಿಸಿ ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ಹರ್ಷ ಮುತಾಲಿಕ್ ಮನವಿಯನ್ನು ಸಲ್ಲಿಸಿದ್ದರು.

ಸುತ್ತೋಲೆಯಲ್ಲಿರುವ ಸಾರಾಂಶ…
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಮನವಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಸದರಿ ಮನವಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಲ್ಲಿಸುವ ಪ್ರಾರ್ಥನೆಯಲ್ಲಿ ಹೆಚ್ಚು ಧ್ವನಿ ಉಂಟಾಗುತ್ತಿರುವುದರಿಂದ ಅನೇಕ ತೊಂದರೆ ಉಂಟಾಗುತ್ತಿದೆ.

ಈ ಬಗ್ಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆದ್ದರಿಂದ, ಈ ಬಗ್ಗೆ ಮಾಹಿತಿ ಹಾಗೂ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Comments are closed.