ಕರಾವಳಿ

ರಾಜ್ಯದಲ್ಲಿ ಲವ್‌ ಜಿಹಾದ್‌,ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ – ಪ್ರವಾಸೋದ್ಯಮ, ಸಾಗರೋತ್ಪನ್ನಗಳ ‌ಮೌಲ್ಯವರ್ಧನೆ ಸೇರಿದಂತೆ ಕರಾವಳಿಯ ಅಭಿವೃದ್ಧಿಗೆ ಒತ್ತು: ಸಿಎಂ

Pinterest LinkedIn Tumblr

ಮಂಗಳೂರು, ನವೆಂಬರ್.05 : ಶಾಸಕರ‌ ಅಭಿವೃದ್ಧಿ ನಿಧಿಗೆ ರೂ.50 ಲಕ್ಷ‌ ಬಿಡುಗಡೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ನಗರ ‌ವಿಕಾಸ ಯೋಜನೆಯಡಿ ಮಂಗಳೂರು‌ ಸೇರಿದಂತೆ ರಾಜ್ಯದ 10 ನಗರಗಳಿಗೆ ತಲಾ 50 ಕೋಟಿ‌ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ‌ ಪ್ರತಿ ನಗರದ ಅಭಿವೃದ್ಧಿಗೆ 125 ಕೋಟಿ ರೂ ಬಳಸಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌‌.ಯಡಿಯೂರಪ್ಪ ಹೇಳಿದರು.

ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್‌ ಕಮಿಟಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.”ಕರಾವಳಿಯಲ್ಲಿ ಆಂತರಿಕ ಭದ್ರತೆಗೆ ಪ್ರಾಶಸ್ತ್ಯ ಕೊಡಲು ನಿರ್ಧರಿಸಲಾಗಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ಆರು ತಿಂಗಳಿನಲ್ಲಿ ಕರಾವಳಿಯಲ್ಲಿ ಬದಲಾವಣೆಯಾಗಲಿದೆ. ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಂಡಿದ್ದೇವೆ”

ಸಾಗರದ‌ ಅಲೆಗಳಿಂದ ವಿದ್ಯುತ್‌ ಉತ್ಪಾದನೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಸಾಗರೋತ್ಪನ್ನಗಳ ‌ಮೌಲ್ಯವರ್ಧನೆ ಮಾಡುವ‌ ಮೂಲಕ ಉದ್ಯೋಗಾವಕಾಶ ಒದಗಿಸಲು ರಾಜ್ಯ‌ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಅವರು ತಿಳಿಸಿದರು. ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕಾಮಗಾರಿ ‌ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. 6 ತಿಂಗಳಲ್ಲಿ ಬದಲಾವಣೆ‌ ಕಾಣಲಿದೆ ಎಂದರು.

“ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಟ್ಟಹಾಕಲಾಗುತ್ತಿದೆ. ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮ‌ ಕೈಗೊಂಡಿದೆ. ಡ್ರಗ್ಸ್ ಮುಕ್ತ‌ ರಾಜ್ಯ ಮಾಡುವ‌ ಮೂಲಕ ವಿದ್ಯಾರ್ಥಿಗಳು, ಯುವಜನರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಲವ್‌ ಜಿಹಾದ್‌ ತಡೆಗೆ ಕಾನೂನು ಜಾರಿ ಬಗ್ಗೆ ಮಾತನಾಡಿದ ಅವರು, ಲವ್‌ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದ್ದು, ರಾಜ್ಯದಲ್ಲಿ‌ ಇದಕ್ಕೆ ಕಡಿವಾಣ ಹಾಕಲಾಗುತ್ತದೆ.‌ ಯಾರು ಮಾಡುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ.‌ ಸಮಗ್ರವಾಗಿ ‌ಚರ್ಚಿಸಿ ರಾಜ್ಯದಲ್ಲಿ ಇದಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು.

ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಕೊನೆ ಮಾಡುತ್ತೇವೆ. ಮತಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶಿರಾ, ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ‌. ಆರ್.ಆರ್. ನಗರದಲ್ಲಿ 40ರಿಂದ 45 ಸಾವಿರ, ಶಿರಾದಲ್ಲಿ‌ 20ರಿಂದ 25 ಸಾವಿರ‌ ಮತಗಳ ಅಂತರದಿಂದ‌ ಬಿಜೆಪಿ ಜಯಗಳಿಸಲಿದೆ. ವಿಧಾನಪರಿಷತ್‌ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಇಲ್ಲಸಲ್ಲದ‌ ಹೇಳಿಕೆ ‌ನೀಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ಸಿಗರಿಗೆ ಉತ್ತರ ಸಿಗಲಿದೆ ಎಂದು ಸಿಎಂ ಹೇಳಿದರು.

“ಮಂಗಳೂರಿನಲ್ಲಿ 20 ವರ್ಷಗಳ ನಂತರ ರಾಜ್ಯಕಾರ್ಯಕಾರಿಣಿ ಸಭೆಯಾಗುತ್ತಿದೆ. ರಾಜ್ಯಾಧ್ಯಕ್ಷರಾದ ಬಳಿಕ ನಳಿನ್‌ ಕುಮಾರ್‌ ಕಟೀಲ್‌ ಅವರು ಪಕ್ಷ ಬಲಪಡಿಸಿದ್ದಾರೆ. ಎರಡು ವರ್ಷಗಳ ಬಳಿಕ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ. 2014ರಲ್ಲಿ ಬಿಜೆಪಿ 104 ಸೀಟ್‌ ಗಳಿಸಿತ್ತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 18 ಮಂದಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಗೆ ಸೇರಿದ್ದರು. 18 ಜನರ ಸಹಕಾರದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ಪಕ್ಷ‌ ಸಂಘಟನೆಗೆ‌ ದಕ್ಷಿಣ ಕನ್ನಡ ರಾಜ್ಯಕ್ಕೆ‌ ಮಾದರಿ. ಇದೇ‌ ಮಾದರಿಯಲ್ಲಿ ಪಕ್ಷ‌ ಸಂಘಟಿಸುವ‌ ಮೂಲಕ ಮುಂಬರುವ ‌ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 140-150 ಸ್ಥಾನ ಗೆಲ್ಲುವಂತಾಗಲಿ.‌ಇದಕ್ಕೆ ನಳಿನ್ ಕುಮಾರ್‌ ನೇತೃತ್ವದಲ್ಲಿ ಎಲ್ಲರೂ ಅಗತ್ಯ ‌ಸಹಕಾರ ನೀಡಬೇಕು ಎಂದು ಹೇಳಿದರು.

ಯಾವುದೇ ಚುನಾವಣೆಯನ್ನು ಕಾರ್ಯಕರ್ತರು ಹಗುರವಾಗಿ ಪರಿಗಣಿಸಬಾರದು.‌ ಗ್ರಾಮ ಪಂಚಾಯಿತಿ ಯಿಂದ ಲೋಕಸಭೆಯವರೆಗೆ ಎಲ್ಲೆಡೆಯೂ ಪಕ್ಷ‌ ಅಧಿಕಾರಕ್ಕೆ ಬರಬೇಕು. ಅಧಿಕಾರದ ಮೂಲಕ ಜನರ‌ ಕಲ್ಯಾಣ ಮಾಡುವುದಕ್ಕಾಗಿ ಪಕ್ಷದ‌ ಸಂಘಟನೆ ಮಾಡಬೇಕು ಎಂದು ಸಲಹೆ‌ ನೀಡಿದರು.

ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸ್ಥಿತಿ ಗತಿಯ ಬಗ್ಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸ್ಥಿತಿಯಲ್ಲಿದೆ. ಆದರೆ ಇನ್ನೂ ಹಲವು ತಿಂಗಳು ಕೊರೊನಾ ನಿಯಮ ಪಾಲಿಸಬೇಕಾಗಿದೆ” ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿ.ವಿ. ಸದಾನಂದ ಗೌಡ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ಕೆ.ಎಸ್.ಈಶ್ವರಪ್ಪ, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ದ.ಕ.ಜಿಲ್ಲೆಯ ಪಕ್ಷದ ಇತರ ಶಾಸಕರು, ಮೇಯರ್, ಜಿಲ್ಲಾಧ್ಯಕ್ಷರು, ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಸುದೇಶ್ ಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಬರೆದಂತಹ “ಜನತಾ ಸಂಸದ” ತ್ರೈಮಾಸಿಕ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್‌‌.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್ ಸಹಿತಾ ಮತ್ತಿತ್ತರ ಅಥಿತಿಗಳು ಬಿಡುಗಡೆಗೊಳಿಸಿದರು.

Comments are closed.