ಕರಾವಳಿ

ಮಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು: ಪತ್ನಿಯ ಕೈವಾಡ ಶಂಕೆ?.

Pinterest LinkedIn Tumblr

ಮಂಗಳೂರು, ನವೆಂಬರ್.03: ಮಂಗಳೂರಿನ ಹೊರವಲಯದ ಕಾವೂರಿನಲ್ಲಿ ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದವರನ್ನು ಸ್ಥಳೀಯವಾಗಿ ಫಾರ್ಮ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೇರಳ ಮೂಲದ ಉದ್ಯಮಿ ಪ್ರಸ್ತುತ ಕಾವೂರು ಮಲ್ಲಿ ಲೇಔಟ್ ನಲ್ಲಿ ವಾಸ್ತವ್ಯ ಹೊಂದಿರುವ ಸುರೇಂದ್ರನ್ (60)ಎಂದು ಗುರುತಿಸಲಾಗಿದೆ.

ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಇಂದು ಮಧ್ಯಾಹ್ನ ಸುರೇಂದ್ರನ್ ಅವರು ಮನೆಗೆ ಮರಳಿ ಬಂದಿದ್ದು, ಈ ವೇಳೆ ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು ಎನ್ನಲಾಗಿದೆ.

ಸುರೇಂದ್ರನ್ ಅವರ ಪತ್ನಿ ಸಂಜೆ ಮನೆಗೆ ಬಂದಾಗ ಮನೆ ಸುತ್ತ ಜನ ಸೇರಿದ್ದರು. ಈ ಸಂದರ್ಭ ತಮ್ಮ ಪತಿ ಕೊಲೆಯಾದ ವಿಷಯ ಅವರಿಗೆ ತಿಳಿದಿದೆ ಎನ್ನಲಾಗಿದೆ. ಸುರೇಂದ್ರನ್ ಅವರು ಮನೆಗೆ ಬಂದಿದ್ದಾಗ ದುಷ್ಕರ್ಮಿಗಳು ಈ ಕೊಲೆ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ.

ಪತ್ನಿಯ ಕೈವಾಡ ಶಂಕೆ?

ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕೂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾವೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.