ಕರಾವಳಿ

ಸಾಂಕೇತಿಕ ಹುಲಿವೇಷಧಾರಿಗಳ ಮೆರವಣಿಗೆಯೊಂದಿಗೆ 73ನೇ ವರ್ಷದ ಉಳ್ಳಾಲ ಶಾರದೋತ್ಸವ ಸಂಪನ್ನ

Pinterest LinkedIn Tumblr

ಮಂಗಳೂರು/ ಉಳ್ಳಾಲ: ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ ಅ.21ರಂದು ಪ್ರತಿಷ್ಠೆಗೊಂಡು ಪೂಜಿಸಲ್ಪಟ್ಟ 73ನೇ ವರ್ಷದ ಶಾರದಾ ಮಹೋತ್ಸವವು ಅ.26ರಂದು ಸೋಮವಾರ ಸಂಜೆ ಸಮಾಪನಗೊಂಡಿತು.

ಈ ಬಾರಿ ಕೋವಿಡ್ -19, ಬಗೆಗೆ ಜನಜಾಗೃತಿಗಾಗಿ ಸರಕಾರದ ಆದೇಶದಂತೆ ಸರಳವಾಗಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಎಂದಿನಂತೆ ಮೆರವಣಿಗೆಯು ಸಾಗುವ ದಾರಿಯನ್ನು ಮೊಟಕುಗೊಳಿಸಿ, ಕೇವಲ ಉಳ್ಳಾಲದ ಪ್ರಧಾನ ರಸ್ತೆಯಲ್ಲಿ ಮೆರವಣಿಗೆಯು ಅಬ್ಬಕ್ಕ ವೃತ್ತದ ವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಬಂದು ಕಡಲ ಕಿನಾರೆಗೆ ತಲುಪಿತ್ತು. ಸಾಂಕೇತಿಕವಾಗಿ ಹುಲಿವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭಗವಾಧ್ವಜ ಆರೋಹಣದೊಂದಿಗೆ ಸಮಾರೋಪ ಸಮಾರಂಭವು ಜರುಗಿತು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ ಚೆಟ್ಟಿಯಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹಿತವಚನ ನೀಡಿದರು, ಬಳಿಕ ಜಯಘೋಷದೊಂದಿಗೆ ಶಾರದಾ ವಿಗ್ರಹವನ್ನು ದೋಣಿಯ ಮೂಲಕ ಕೊಂಡೊಯ್ದು ಸಮುದ್ರ ಮಧ್ಯದಲ್ಲಿ ವಿಸರ್ಜಿಸಲಾಯಿತು.

ಈ ಸಂದರ್ಭ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕರ ಕಿಣಿ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಸಹಿತ ಸ್ಥಾಯಿ ಸಮಿತಿಯ ಸದಸ್ಯರು, ಉತ್ಸವ ಸಮಿತಿಯ ಪದಾಧಿಕಾರಿಗಳು,ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಯಶವಂತ ಅಮೀನ್ ಮತ್ತು ಪಶುಪತಿ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.

Comments are closed.