ಮಂಗಳೂರು, ಆಕ್ಟೋಬರ್.26: ಮಾಜಿ ಕೇಂದ್ರ ಸಚಿವ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಜನಾರ್ದನ ಪೂಜಾರಿಯವರ ನೇತ್ರತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ “ಮಂಗಳೂರು ದಸರಾ ಮಹೋತ್ಸವ” ಇಂದು ಸಂಜೆ ಸಮಾಪನಗೊಳ್ಳಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿಯ ಉತ್ಸವದ ನಡುವೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಹಮ್ಮಿಕೊಳ್ಳಲಾಗಿರುವ “ಮಂಗಳೂರು ದಸರಾ ಮಹೋತ್ಸವ” ಕ್ಕೆ ಇಂದು (ಆಕ್ಟೋಬರ್ 26, ಸೋಮವಾರ) ತೆರೆ ಬೀಳಲಿದೆ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ “ಮಂಗಳೂರು ದಸರಾ’ ಮೆರವಣಿಗೆ ಇರುವುದಿಲ್ಲ. ಆದರೆ ಈ ಬಾರಿ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಕ್ಷೇತ್ರದ ಪ್ರಾಂಗಾಣದಲ್ಲಿ ನಡೆಯಲ್ಲಿದ್ದು, ಬಳಿಕ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು.
“ದಸರಾ ಮಹೋತ್ಸವ” ಪ್ರಯುಕ್ತ ಶ್ರೀ ಕ್ಷೇತ್ರದ ದರ್ಬಾರು ಮಂಟಪದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನಾ ಪೂಜೆ ಇಂದು ಸಂಜೆ 6.30ಕ್ಕೆ ನಡೆಯಲಿದೆ. ರಾತ್ರಿ 8ಗಂಟೆಯಿಂದ ಕ್ಷೇತ್ರದ ಪುಷ್ಜರಿಣಿಯಲ್ಲಿ ಗಣಪತಿ, ನವದುರ್ಗೆ, ಆದಿಶಕ್ತಿ, ಶಾರದೆ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಇದಕ್ಕೂ ಮುನ್ನ ಸಂಜೆ 5.30ಕ್ಕೆ ದಸರಾ ಮಹೋತ್ಸವದ ಅಂಗವಾಗಿ ಸಾಂಕೇತಿಕವಾಗಿ ಕುದ್ರೋಳಿ ಕ್ಷೇತ್ರದಿಂದ ನಾರಾಯಣ ಗುರುಗಳ ಭಾವಚಿತ್ರ ಟ್ಯಾಬ್ಲೋ ನಗರ ಪ್ರದಕ್ಷಿಣೆ ಹೊರಡಲಿದೆ.
ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ.ಜಿ. ಸುವರ್ಣ ಹಾಗೂ ಮತ್ತಿತರ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.