ಮಂಗಳೂರು: ‘ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾಯರು ಶತಮಾನ ಕಂಡ ಹಿರಿಯ ಜೀವ. 2018 ರಲ್ಲಿ ಅವರ ಮನೆಗೆ ಹೋಗಿ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿದ ಧನ್ಯತೆ ಕಲ್ಕೂರ ಪ್ರತಿಷ್ಠಾನದ್ದು’ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ ಹಿರಿಯ ಮದ್ದಳೆ ವಾದಕ ಶತಾಯುಷಿ ಹಿರಿಯಡ್ಕ ಗೋಪಾಲರಾಯರಿಗೆ ಜಿಲ್ಲಾ ಕ.ಸಾ.ಪ. ಮತ್ತು ಕಲ್ಕೂರ ಪ್ರತಿಷ್ಠಾನ ವತಿಯಿಂದ ಶ್ರದ್ಧಾಂಜಲಿ ಸಮರ್ಪಿಸಿ ಅವರು ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀಕೃಷ್ಣ ಯಕ್ಷಸಭಾದ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ, ನಿವೃತ್ತ ಪ್ರಾಧ್ಯಾಪಕ ಜಿ.ಕೆ.ಭಟ್ ಸೇರಾಜೆ,ಸಂಘಟಕ ತಾರಾನಾಥ ಹೊಳ್ಳ, ಕದಳಿ ಕಲಾಕೇಂದ್ರದ ಸಂಸ್ಥಾಪಕ ರಮೇಶ್ ಭಟ್ ಕೆ. ನುಡಿನಮನ ಸಲ್ಲಿಸಿದರು.
ಕೊನೆಯಲ್ಲಿ ದಿ.ಗೋಪಾಲ ರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆ ಮೂಲಕ ಅಗಲಿದ ಚೇತನಕ್ಕೆ ಚಿರ ಶಾಂತಿ ಕೋರಲಾಯ್ತು.