ಕರಾವಳಿ

ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಇರಾನಿ ಗ್ಯಾಂಗ್ ಖದೀಮರನ್ನು ಬಂಧಿಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಪೊಲೀಸರ ಸೋಗಿನಲ್ಲಿ ಬಂದು ಒಂಟಿ ಮಹಿಳೆಯರು ಹಾಗೂ ಪುರುಷರನ್ನು ದೋಚುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್‌ಗೆ ಸೇರಿದ ನಾಲ್ವರು ಸದಸ್ಯರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾದ ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22), ಮತ್ತು ಶಾಹರುಖ್ ಬಂದೆನವಾಜ್ ಶೇಖ್ (24) ಬಂಧಿತ ಆರೋಪಿಗಳು.

ಇರಾನಿ ಗ್ಯಾಂಗ್ ಸದಸ್ಯರು ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಅಥವಾ ಗಂಡಸರು ನಡೆದುಕೊಂಡು ಹೋಗುವಾಗ ಅವರ ಬಳಿ ಬಂದು “ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ” ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿ ಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ಲಪಾಟಾಯಿಸುತ್ತಿದ್ದರು.

ಈ ಗ್ಯಾಂಗ್‌ ಮೇಲೆ ಈಗಾಗಲೇ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ಉಡುಪಿ ನಗರ, ಕುಂದಾಪುರ, ಚಿಕ್ಕಮಗಳೂರು, ಬಂಟ್ವಾಳ ಮತ್ತು ಮಂಗಳೂರಿನ ಉರ್ವಾದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ಕಳವು ಮಾಡಿದ 12 ಗ್ರಾಂ ಚಿನ್ನದ ಚೈನ್, ಕೃತ್ಯಕ್ಕೆ ಬಳಸಿದ ಬೈಕು, ಕಾರು, ಎರಡು ಹೆಲ್ಮೆಟ್ ಮತ್ತು ಗ್ಯಾಂಗ್‌ನಿಂದ 5,100 ರೂ. ವಶಕ್ಕೆ ಪಡೆದಿದ್ದಲ್ಲದೆ ಆರೊಪಿಗಳನ್ನು ಕಸ್ಟಡಿಗೆ ಪಡೆದು ಮೋಸ ಮಾಡಿ ಲಪಟಾಯಿಸಿದ್ದ ಚಿನ್ನಾಭರಣ ಮಾರಿದ್ದ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರದಲ್ಲಿರುವ ಶ್ರೀರಾಂಪುರದಲ್ಲಿ ಮಾರಾಟವಾದ 65 ಗ್ರಾಂ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ. ಆಗಿದೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕವಿಷ್ಣುವರ್ಧನ್ ಎನ್. ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷ ಕುಮಾರ ಚಂದ್ರ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ಮಾರ್ಗದರ್ಶನದಲ್ಲಿ, ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್, ಎಎಸ್‌ಐ ರವಿಚಂದ್ರ, ಡಿಸಿಐಬಿ ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸಂತೋಷ್ ಕುಂದರ್, ಸುರೇಶ್, ರಾಘವೇಂದ್ರ ಮತ್ತು ರಾಘವೇಂದ್ರ ಹಾಗೂ ಉಡುಪಿ ನಗರ ಠಾಣೆಯ ಪಿಎಸ್‌‌ಐಗಳಾದ ಸಕ್ತಿವೇಲು.ಇ, ಮತ್ತು ಕುಂದಾಪುರ ಠಾಣಾ ಪಿ.ಎಸ್.ಐ ಸದಾಶಿವ ಗವರೋಜಿ, ಸಿಬ್ಬಂದಿಗಳಾದ ಎ.ಎಸ್.ಐ ಸುಧಾಕರ. ಸಿಬ್ಬಂದಿಗಳಾದ ಲೋಕೇಶ್, ರಿಯಾಝ್, ಅಹ್ಮದ್, ಮಂಜುನಾಥ, ಸಂತೋಷ್ ರವರು ಪತ್ತೆ ಕಾರ್ಯದಲ್ಲಿದ್ದರು.

Comments are closed.