ಕರಾವಳಿ

ನಾಳೆ ಮಂಗಳೂರಿನಲ್ಲಿ “ಕಾರಂತರ 118ನೇ ಹುಟ್ಟುಹಬ್ಬ” ಆಚರಣೆ : ಕಾರಂತ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ಆಕ್ಟೋಬರ್. 09 : ಕಡಲತೀರದ ಭಾರ್ಗವರೆಂದೇ ಖ್ಯಾತರಾದ ಡಾ. ಕೋಟ ಶಿವರಾಮ ಕಾರಂತರ118ನೇ ಜನ್ಮದಿನವನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕುರ ಪ್ರತಿಷ್ಠಾನದ ವತಿಯಿಂದ ನಾಳೆ ಅಕ್ಟೋಬರ್ 10 ಶನಿವಾರ ಬೆಳಿಗ್ಗೆ10.45ಕ್ಕೆ ಕೊಡಿಯಾಲ್‌ಗುತ್ತು ರಸ್ತೆಯಲ್ಲಿರುವ ಹೋಟೇಲ್ ಜನತಾ ಡಿಲಕ್ಸ್‌ನ ಪತ್ತುಮುಡಿ ಸೌಧದಲ್ಲಿ ಆಚರಿಸಲಾಗುವುದು.

‘ಕಾರಂತ ಹುಟ್ಟುಹಬ್ಬ ಸಮಾರಂಭವನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಶ್ರೀ ದಿವಾಕರ ಪಾಂಡೇಶ್ವರ ಉದ್ಘಾಟಿಸಲಿರುವರು. ಇದೇ ಸಂದರ್ಭ ಶಿವರಾಮ ಕಾರಂತರ ನಿಕಟವರ್ತಿ ಸಾಹಿತಿ ಶ್ರೀ ಪಡಾರು ಮಹಾಬಲೇಶ್ವರ ಭಟ್ ಅವರಿಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್. ಎಡಪಡಿತ್ತಾಯರು ಪ್ರಶಸ್ತಿ ಪ್ರದಾನ ಮಾಡಲಿರುವರು. ಮಾಜಿ ಎಂ.ಎಲ್.ಸಿ. ಕ್ಯಾ. ಗಣೇಶ್ ಕಾರ್ಣಿಕ್ ಪುಷ್ಪನಮನ ಸಲ್ಲಿಸುವರು. ಸಭಾಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಹಿಸಲಿದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಬಂಧ ಸ್ಪರ್ಧೆ ಹಾಗೂ ಕಾರ್ಡಿನಲ್ಲಿ ಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿರುವರು.

ಕಲಾಕ್ಷೇತ್ರದಲ್ಲಿ ಅನನ್ಯ ಸೇವೆಗೈದಿರುವ ಕಾಸರಗೋಡಿನ ಹೊಸದುರ್ಗದ ಜಯಾನಂದ ಕುಮಾರ ಅವರಿಗೆ ಕಲ್ಕೂರ ಕಾರಂತ ಹುಟ್ಟುಹಬ್ಬ ಕಲಾಸೇವ ಪ್ರಶಸ್ತಿ’ ಹಾಗೂ ಕ್ರೀಡಾ ವಿಭಾಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಅಕ್ಷತಾ ಪೂಜಾರಿ ಬೋಳ ಅವರಿಗೆ ಕಲ್ಕೂರ ಯುವ ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಅಭಿನಂದನಾ ಭಾ ಷಣ ಮಾಡಲಿರುವರು ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.