ಕರಾವಳಿ

ನಿರುದ್ಯೋಗಿ ಮಹಿಳೆಯರಿಗೆ ಫ್ಯಾಶನ್ ಮತ್ತು ಡ್ರೆಸ್ ಡಿಸೈನಿಂಗ್‍ನಲ್ಲಿ ಹೊಸ ಅವಿಷ್ಕಾರದ ಕಾರ್ಯಗಾರ

Pinterest LinkedIn Tumblr

ಮಂಗಳೂರು ಅಕ್ಟೋಬರ್ 09 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರದಲ್ಲಿರುವ ಟ್ರಸ್ಟ್‌ನ ಸಭಾಂಗಣದಲ್ಲಿ ಜರಗಿದ ಜಿಲ್ಲೆಯ ಆಯ್ದ ನಿರುದ್ಯೋಗಿ ಮಹಿಳೆಯರಿಗೆ ಉಚಿತ 30 ದಿನಗಳ ಫ್ಯಾಶನ್ ಮತ್ತು ಡ್ರೆಸ್ ಡಿಸೈನಿಂಗ್ ಕೌಶಲ್ಯಾಭಿವೃದ್ಧಿ ಅವಿಷ್ಕಾರ ಕಾರ್ಯಗಾರದ ಸಮಾರೋಪ ಸಮಾರಂಭ ನೆರವೇರಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಗಣಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್‍ಕುಮಾರ್ ಎಂ. ಪಿ ಮಾತನಾಡಿ, ಕೌಶಲ್ಯವನ್ನು ಮೈಗೂಡಿಸಿಕೊಂಡು ತಮ್ಮ ಸಾಮಥ್ರ್ಯ ಹಾಗೂ ಆತ್ಮವಿಶ್ವಾಸಗಳಿಗನುಗುಣವಾಗಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಯೋಜನೆಯಡಿ ಅಥವಾ ಸರಕಾರದ ಇತರೇ ಸಾಲ ಸೌಲಭ್ಯಗಳನ್ನು ಪಡೆಯಲು ರಾಷ್ಟೀಕೃತ ಬ್ಯಾಂಕ್‍ಗಳು ಸರ್ವ ರೀತಿಯ ಸಹಕಾರ ಮಾರ್ಗದರ್ಶನ ನೀಡಲಿದೆಯೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಮಾತನಾಡಿ, ತಮಗೆ ಈ ಸಂದರ್ಭದಲ್ಲಿ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದು ಸರಕಾರದ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಧನಸಹಾಯ ಹಾಗೂ ಸಹಾಯಧನ ಪಡೆಯುವಲ್ಲಿ ಮುಖ್ಯಸೇತುವಾಗಿ ಸಿಡಾಕ್ ಸಂಸ್ಥೆ ಶ್ರಮಿಸಲಿದೆಯೆಂದು ತಿಳಿಸಿದರು. ಜಿಲ್ಲಾ ಕೌಶಲ್ಯಾಧಿಕಾರಿ ತಾರಾನಾಥ ಇವರು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ದೊರೆಯುವ ಉಚಿತ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಟ್ರಸ್ಟಿಯ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಶಿಕ್ಷಕ ಸುರೇಶ್ ಹಾಗೂ ವಸಂತಿ ಮೋಹನಾಂಗಯ್ಯ ಸ್ವಾಮಿ, ಸಿಡಾಕ್‍ನ ತರಬೇತುದಾರರಾದ ಕು. ಪ್ರವಿಷ್ಯ ಹಾಗೂ ಕು. ವಿದ್ಯಾ ಉಪಸ್ಥಿತರಿದ್ದರು.

Comments are closed.