ಕರಾವಳಿ

ನಿರಂತರ ಯೋಗದಿಂದ ಮಾನಸಿಕ ಒತ್ತಡ ಹಾಗೂ ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ ; ಡಾ. ಪ್ರಭಾಕರ ಭಟ್ ಕಲ್ಲಡ್ಕ

Pinterest LinkedIn Tumblr

ಮಂಗಳೂರು : ಅಕ್ಟೋಬರ್ 06: ನಮ್ಮ ದೇಹದ ಸರ್ವರೋಗಗಳ ನಿಯಂತ್ರಣ ಹಾಗೂ ಬುದ್ಧಿ, ನರ ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ಶಕ್ತಿ ಕೊಡಲು ಯೋಗದಿಂದ ಮಾತ್ರ ಸಾಧ್ಯ. ನಿರಂತರ ಯೋಗದಿಂದ ಮಾನಸಿಕ ಒತ್ತಡ ಹಾಗೂ ಅನೇಕ ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿ ಪಡೆಯ ಬಹುದು ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಕಾರದೊಂದಿಗೆ ಧೀ ಶಕ್ತಿ ಜ್ಞಾನ ಯೋಗ ವತಿಯಿಂದ ಕಳೆದ ಹತ್ತು ದಿನಗಳ ಕಾಲ ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ಧೀ ಶಕ್ತಿ ಜ್ಞಾನ ಯೋಗದ ಗುರೂಜಿಯವರು ನಡೆಸಿಕೊಟ್ಟ “ಯೋಗಾಯನೊ” (ಉಚಿತ ಧ್ಯಾನ ಯೋಗ ಶಿಬಿರ) ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅನೇಕಾನೇಕ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದಂತ ರೋಗಗಳನ್ನು ತಡೆಗಟ್ಟುವಂತಹ ಶಕ್ತಿ ಪ್ರಾಣಾಯಾಮಕ್ಕೆ ಇದೆ. ಮನುಷ್ಯನ ಕೋಪವನ್ನು ನಿಯಂತ್ರಿಸುವ ಶಕ್ತಿ ಯೋಗಕ್ಕಿದೆ. ಅಷ್ಟಾಂಗ ಯೋಗದಿಂದ ತೇಜಸ್ಸು ಬರುತ್ತದೆ. ಮಾನಸಿಕವಾಗಿ ದೃತಿಗೆಡದಂತೆ ಇರಲು ಯೋಗ ಸಹಕಾರಿಯಾಗಿದೆ. ಅನಾರೋಗ್ಯಗಳನ್ನು ಬರದಂತೆ ತಡೆಯುವ ದೊಡ್ದ ಶಕ್ತಿ ಯೋಗ, ಧ್ಯಾನಕ್ಕಿದೆ. ಕಡಿಮೆ ತಿಂದ ಹೆಚ್ಚು ಶಕ್ತಿಶಾಲಿಯಾಗಲು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇಡೀ ಜಗತ್ತಿನಲ್ಲಿಯೇ ದೊಡ್ಡ ಬದಲಾವಣೆಯಾಗಿದೆ. ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ190ಕ್ಕೂ ಹೆಚ್ಚು ದೇಶಗಳು ಇಂದು ಯೋಗಕ್ಕೆ ಶರಣಾಗಿದೆ. ನಮ್ಮ ಇಂದಿನ ಅಧುನಿಕ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಹಿತಮಿತ ಆಹಾರ ಪದ್ಧತಿಯೊಂದಿಗೆ ನಿರಂತರ ಯೋಗ ಮಾಡುವ ಮೂಲಕ ಪ್ರತಿಯೊಬ್ಬರು ಅನಾರೋಗ್ಯದಿಂದ ಮುಕ್ತಿ ಪಡೆದು ಆರೋಗ್ಯಕರ ಜೀನವ ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯ ಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಅಸಿಸ್ಟೆಂಟ್ ಗವರ್ನರ್ ರೋ. ಆನಂದ ಶೆಟ್ಟಿ, ಮಾಜಿ ಗವರ್ನರ್ ರೋ.ಡಾ.ದೇವದಾಸ್ ರೈ, ಮನಪಾ ಸದಸೈ ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಶಶಿಧರ್ ಶೆಟ್ಟಿ, ಚೇತಕ್ ಪೂಜಾರಿ ಮುಂತಾದವರು ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಹತ್ತು ದಿನಗಳಿಂದ ಯೋಗ ನಡೆಸಿಕೊಟ್ಟ ಧೀ ಶಕ್ತಿ ಜ್ಞಾನ ಯೋಗದ ಗುರೂಜಿಯವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಗೌರವಿಸಲಾಯಿತು. ಗುರೂಜಿಯವರಿಗೆ ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸನ್ಮಾನಿಸಿದರು.

ಕಾರ್ಯಕ್ರಮದ ಸಂಚಾಲಕ, ರೋಟರಿ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಗಳ ಜಿಲ್ಲಾ ಚೆಯರ್‌ಮೆನ್ ರೋ. ರಾಜಗೋಪಾಲ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು.

ಯೋಗ ಶಕ್ತಿಯ ಮಹತ್ವದ ಬಗ್ಗೆ ತಿಳಿಸಿದ ರಾಜಗೋಪಾಲ ರೈ ಅವರು, ಮೈಮನಸ್ಸು ಉಲ್ಲಾಸದೊಂದಿಗೆ ಯಾವೂದೇ ರೀತಿಯ ಅನ್ಯ ಚಿಂತನೆಗೆ ಅವಕಾಶ ನೀಡದೇ ಅರೋಗ್ಯದಿಂದಿರಲು ಯೋಗ ಸಹಕಾರಿ ಎಂದು ಹೇಳಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೋ. ಪ್ರಕಾಶ್ಚಂದ್ರ ಅವರು ಧನ್ಯವಾದ ಸಮರ್ಪಿಸಿದರು.

Comments are closed.