ಕರಾವಳಿ

ಮಾದಕ ಜಾಲ : ಮಂಗಳೂರು ಪೊಲೀಸರು ಬಂಧಿಸಿರುವ 8 ಮಂದಿಯಲ್ಲಿ ಇಬ್ಬರಿಗೆ ಪೊಲೀಸ್ ಕಸ್ಟಡಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್.03: ಮಂಗಳೂರು ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ನೈಜೀರಿಯ ಪ್ರಜೆ ಘಾನಾ ರಾಜ್ಯದ ಕುಮಾಸ್‌ ನಿವಾಸಿ ಫ್ರಾಂಕ್ ಸಂಡೇ ಇಬೆಬುಚಿ (33) ಹಾಗೂ ಕೂಳೂರು ಗುಡ್ಡೆಯಂಗಡಿಯ ಶಮೀನ್ ಫರ್ನಾಂಡಿಸ್ ಯಾನೆ ಶ್ಯಾಮ್ (28) ಎಂಬವರನ್ನು ಸಿಸಿಬಿ ಪೊಲೀಸರು ಅ.4ರ ತನಕ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಇನ್ನೊರ್ವ ಆರೋಪಿ ತೊಕ್ಕೊಟು ಹಿದಾಯತ್‌ ನಗರದ ನಿವಾಸಿ ಶಾನ್ ನವಾಝ್ (34) ಎಂಬವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಮಾದಕ ವಸ್ತು ದಂಧೆ ಪ್ರಕರಣಕ್ಕೆ ಸಂಬಂಧಿಸಿ ಡ್ಯಾನ್ಸರ್ ಅಮನ್‌ ಹಾಗೂ ಅಕೀಲ್ ನೌಶೀಲ್‌ನ್ನು ಬಂಧಿಸಿದ ಬಳಿಕ ಡ್ರಗ್‌ ಪೆಡ್ಲರ್‌ಗಳಿಗೆ ಬಲೆ ಬೀಸುತ್ತಲ್ಲೇ ಇರುವ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಹಲವು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಜೊತೆಗೆ ಇನ್ನೊರ್ವ ಕೊರಿಯಾಗ್ರಾಫರ್ ತರುಣ್‌ರಾಜ್ ಹಾಗೂ ಮಣಿಪುರದ ಆಸ್ಕಾ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಅಮನ್‌ ಹಾಗೂ ಅಕೀಲ್ ನೌಶೀಲ್‌ ಬಂಧನದ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರಿನ ಬಂದರು ಮೂಲದ ನಿವಾಸಿ ಪೆಡ್ಲರ್ ಶಾ ನವಾಜ್‌ನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಸುರತ್ಕಲ್ ಸೂರಿಂಜೆ ನಿವಾಸಿ ಮುಹಮ್ಮದ್ ಶಾಕೀರ್ (35) ಎಂಬಾತನನ್ನು ಪೊಲೀಸರು ಬಂಧಿಸಿ ಆರೋಪಿಯಿಂದ ಸುಮಾರು 27 ಸಾವಿರ ರೂ. ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.

ಆ ಬಳಿಕ ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕೂಳೂರು ಗುಡ್ಡೆಯಂಗಡಿಯ ಶಮೀನ್ ಫರ್ನಾಂಡಿಸ್ ಯಾನೆ ಶ್ಯಾಮ್, ತೊಕ್ಕೊಟ್ಟು ನಿವಾಸಿ ಶಾನ್ ನವಾಝ್, ಪ್ರಮುಖ ಪಡ್ಲರ್ ನೈಜೀರಿಯ ಪ್ರಜೆ ಫ್ರಾಂಕ್ ಸಂಡೇ ಇಬೆಬುಚಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಆತನಿಂದ ಡ್ರಗ್ಸ್ ಪೂರೈಕೆ ಹಾಗೂ ಪಾರ್ಟಿ ಆಯೋಜನೆ ಕುರಿತು ಮತ್ತಷ್ಟು ಮಾಹಿತಿಗಳು ಪೊಲೀಸ್ ತಂಡಕ್ಕೆ ಲಭ್ಯವಾಗಿದೆ.

ಇವರೆಲ್ಲರು ಮುಂಬೈ, ಗೋವಾ, ಬೆಂಗಳೂರು ಸಹಿತ ವಿವಿಧೆಡೆಯಿಂದ ಮಂಗಳೂರು ನಗರಕ್ಕೆ ಎಂಡಿಎಂಎ, ಎಲ್‌ಎಸ್‌ಡಿ, ಸೇರಿದಂತೆ ಇನ್ನಿತರ ಸಿಥೆಟಿಕ್ ಡ್ರಗ್ಸ್ ಗಳನ್ನು ಸಾಗಾಟ ಮಾಡುತ್ತಿದ್ದರು. ಜೊತೆಗೆ ಈ ಪೆಡ್ಲರ್‌ಗಳು ಡ್ಯಾನ್ಸರ್ ಕಿಶೋರ್  ಹಾಗೂ ಅಕೀಲ್ ನೌಶೀಲ್‌ಗೆ ಮುಂಬೈ, ಗೋವಾದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 8 ಮಂದಿಯನ್ನು ಬಂಧನ ಮಾಡಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಎಲ್ಲ ಆರೋಪಿಗಳಿಗೆ ಕೊರೋನ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.