ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ನದಿ ತೀರದ ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿದ್ದು ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಹಿನ್ನೆಲೆಯಲ್ಲಿ ನದಿ ತೀರ ಹಾಗೂ ಕುದ್ರುಗಳಲ್ಲಿ ವಾಸಿಸುವ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 45 ಸೆ.ಮೀ ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿದೆ. ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ 700 ಕುಟುಂಬಗಳ 2500 ಕ್ಕೂ ಹೆಚ್ಚಿನ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸಗಳನ್ನು ಎನ್.ಡಿ.ಆರ್.ಎಫ್, ನೇವಿ, ಅಗ್ನಿಶಾಮಕದಳ, ಕರಾವಳಿ ರಕ್ಷಣಾ ಪಡೆ, ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರದಲ್ಲಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.

ರಾತ್ರಿ ಸಮಯದಲ್ಲಿ ನದಿ ತೀರದಲ್ಲಿ ಉಳಿಯುವುದು ಸುರಕ್ಷಿತವಲ್ಲ. ಪ್ರವಾಹ ಎದುರಾದರೇ ರಕ್ಷಣೆಯೂ ಕಷ್ಟವಾಗಿರುವ ಕಾರಣ ತೀರವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಬರುವುದು ಸೂಕ್ತ. ಈಗಾಗಲೇ ಜಿಲ್ಲೆಯ ತಹಶೀಲ್ದಾರ್ ತಂಡ ಸುರಕ್ಷಿತವಾದ ಪರಿಹಾರ ಕೇಂದ್ರಗಳನ್ನು ಗುರುತಿಸಿದ್ದು ನದಿ ತೀರದ ವಾಸಿಗಳು ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಜಿಲ್ಲಾಡಳಿತದಿಂದ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Comments are closed.