ನವದೆಹಲಿ: ಭಾರೀ ವಿರೋಧದ ನಡುವೆ ರಾಜ್ಯಸಭೆಯಲ್ಲೂ ಕೃಷಿ ಮಸೂದೆಗಳಿಗೆ ಅಂಗೀಕಾರ ದೊರೆತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮಸೂದೆಗಳು ಅಂಗೀಕಾರ ಆಗಿರುವುದು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವು ಎಂದಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆಯನ್ನು ಮಂಡನೆ ಮಾಡಲಾಗಿತ್ತು. ಮಸೂದೆ ಕುರಿತು ಚರ್ಚೆಗೆ ಇಂದು ಅವಕಾಶ ನೀಡಲಾಗಿತ್ತು. ರಾಜ್ಯಸಭೆಯಲ್ಲಿ ಮಸೂದೆಯನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ವಿರೋಧಿಸಿದ್ದವು. ಇಷ್ಟೆಲ್ಲಾ ವಿರೋಧ, ಗದ್ದಲದ ನಡುವೆಯೂ ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಅನುಮೋದನೆಯಾಗಿವೆ.
ಪ್ರಜಾಪ್ರಭುತ್ವವವನ್ನು ಗಾಳಿಗೆ ತೂರಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ರಾಜ್ಯ ಸಭೆಯಲ್ಲಿ ಮಸೂದೆ ಪಾಸ್ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್ ಮತ್ತಿತರ ಸಂಸದರು ರಾಜ್ಯಸಭೆಯಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ.ರಾಜ್ಯಸಭೆ ನಡೆಯುತ್ತಿರುವ ವೇಳೆ ಇದೇ ಮೊದಲ ಬಾರಿಗೆ ಟಿವಿ ಲೈವ್ ಕವರೇಜ್ ಕೂಡ ನಿಲ್ಲಿಸಲಾಗಿತ್ತು. ಈ ವೇಳೆ ಮೋಸದಿಂದ ಬಿಲ್ಲನ್ನು ಪಾಸ್ ಮಾಡಿಕೊಳ್ಳಲಾಗಿದೆ, ಜನರಿಗೆ ಸತ್ಯವನ್ನು ತಲುಪದಂತೆ ಮಾಡಲು ಬಿಜೆಪಿ ಈ ರೀತಿ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.
ರೈತರಿಗೆ ಮೋದಿ ಆಶ್ವಾಸನೆ:
ಈ ಎರಡು ಕೃಷಿ ಮಸೂದೆಗಳಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ಈ ಹಿಂದೆ ನೀಡಲಾಗುತ್ತಿದ್ದ ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದೆ, ರೈತರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Comments are closed.