ಪ್ರಮುಖ ವರದಿಗಳು

ಚೀನಾದ ಕಿರಿಕಿರಿಯ ಜೊತೆ ಹೆಚ್ಚಿದ ಪಾಕ್ ಉಪಟಳ : ಏಕಕಾಲದಲ್ಲಿ ಎರಡು ರಾಷ್ಟ್ರಗಳ ಜೊತೆ ಯುದ್ಧ ಸಾಧ್ಯತೆ

Pinterest LinkedIn Tumblr

ನವದೆಹಲಿ: ಭಾರತದ ಉತ್ತರ ಭಾಗದ ಎರಡೂ ಕಡೆಯ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಪದೇಪದೆ ಭಾರತದ ತಾಳ್ಮೆ ಪರೀಕ್ಷೆ ಮಾಡುತ್ತಿರುವ ನೆರೆಯ ಪಾಕಿಸ್ತಾನ, ಇತ್ತೀಚೆಗೆ ತನ್ನ ಉಪಟಳ ಹೆಚ್ಚಿಸಿದ್ದು, ಎಲ್​ಒಸಿಯಲ್ಲಿ ಪಾಕಿಸ್ತಾನ ಪದೇಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ.

ಗಡಿ ನಿಯಂತ್ರಣ ರೇಖೆ ಬಳಿ ಈ ವರ್ಷ ಪಾಕಿಸ್ತಾನ ಸೇನೆ ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟದ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಜಮ್ಮು ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಎಂಟು ತಿಂಗಳಲ್ಲಿ ಪಾಕಿಸ್ತಾನವು 3,186 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಸರ್ಕಾರ ತಿಳಿಸಿದೆ.

ಚೀನಾ ಕಿರಿಕಿರಿ ನಡುವೆ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಪಾಕಿಸ್ತಾನವು ಜನವರಿಯಿಂದೀಚೆಗೆ ಜಮ್ಮು ಭಾಗದ ಎಲ್​ಒಸಿಯಲ್ಲಿ ಪಾಕಿಸ್ಥಾನ 3,186 ಬಾರಿ ಕದನ ವಿರಾಮ ಉಲ್ಲಂಘಿಸಿರುವುದರ ಜೊತೆಗೆ ‘ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಜೊತೆಗೆ ಜ.1ರಿಂದ ಆ.31ರವರೆಗೆ 242 ಬಾರಿ ಗುಂಡಿನ ಚಕಮಕಿ ನಡೆದಿದೆ’ ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ರಾಜ್ಯಸಭೆಯಲ್ಲಿ ತಿಳಿಸಿರುವ ಬಗ್ಗೆಯೂ ವರದಿಯಾಗಿದೆ.

ಸೈನ್ಯದ ದಾಖಲೆಗಳ ಪ್ರಕಾರ, ನಿಯಂತ್ರಣ ರೇಖೆಯ ಉದ್ದಕ್ಕೂ 2017ರಲ್ಲಿ 971 ಮತ್ತು 2018 ರಲ್ಲಿ 1,629 ಗಡಿ ಉಲ್ಲಂಘನೆ ಪ್ರಕರಣ ಆಗಿತ್ತು. 2019ರಲ್ಲಿ 3,168 ಕ್ಕೆ ತಲುಪಿದ್ದು, ಬಾಲಾಕೋಟ್ ವಾಯುದಾಳಿಯ ನಂತರ ಪ್ರಮುಖ ಸರ್ಜಿಕಲ್ ಸ್ಪೈಕ್‌ಗಳಲ್ಲದೇ ಆರ್ಟಿಕಲ್ 370 ಮತ್ತು ಜಮ್ಮು ಕಾಶ್ಮೀರ ವಿಭಜನೆ ಬಳಿಕ ಪಾಕ್ ಕಿರಿಕಿರಿ ಹೆಚ್ಚು ಮಾಡಿದೆ.

ಸೆ.7ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೇನೆ ಹಾಗೂ ಬಿಎಸ್‌ಎಫ್‌ ಕದನವಿರಾಮ ಉಲ್ಲಂಘನೆಗೆ ತಕ್ಕ ಪ‍್ರತ್ಯುತ್ತರ ನೀಡಿದೆ’ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

ಕಳೆದ 17 ವರ್ಷಗಳಲ್ಲೇ ಇಲ್ಲಿ ಪಾಕಿಸ್ತಾನ ಈಗ ಅತಿಹೆಚ್ಚು ಕಿತಾಪತಿ ಮಾಡುತ್ತಿದೆ. ಇನ್ನೊಂದೆಡೆ ಚೀನಾ ದೇಶ ಲಡಾಖ್​ನ ಎಲ್​ಎಸಿಯಲ್ಲಿ ಭಾರತದ ಭೂಭಾಗವನ್ನೇ ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈಗ ಲಡಾಖ್​ನಲ್ಲಿ ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್​ಗಳನ್ನ ಅಳವಡಿಸುತ್ತಿರುವ ಸುದ್ದಿ ಕೇಳಿಬಂದಿದೆ. ಇವೆಲ್ಲವನ್ನೂ ಗಮನಿಸಿದರೆ ಭಾರತ ಏಕಕಾಲದಲ್ಲಿ ಇಬ್ಬರು ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿ ಬರ ಬಹುದು ಎನ್ನಲಾಗುತ್ತಿದೆ.

ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್​ಗಳನ್ನ ಅಳವಡಿಸುತ್ತಿರುವ ಲಡಾಖ್​ನ ಪಾಂಗಾಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಇತ್ತೀಚೆಗೆ ಭಾರತದ ಭಾಗವನ್ನು ಅತಿಕ್ರಮಿಸಲು ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದರು.

ಈಗ ಸರೋವರದ ಉತ್ತರ ಮತ್ತು ದಕ್ಷಿಣ ಭಾಗದ ಅನೇಕ ಮಹತ್ವದ ಎತ್ತರದ ಜಾಗಗಳು ಭಾರತದ ವಶದಲ್ಲಿವೆ. ಆದರೂ ಚೀನಾ ಸೇನೆ ತನ್ನ ಹಠಮಾರಿತನ ಹೆಚ್ಚು ಮಾಡುತ್ತಿರುವಂತಿದೆ. ಫೈಬರ್ ಆಪ್ಟಿಕ್ ಕೇಬಲ್ ಅಳವಡಿಸುವುದರಿಂದ ಚೀನಾದ ಸೇನಾ ನೆಲೆಗಳ ಸಂವಹನಕ್ಕೆ ಅನುಕೂಲ ಮಾಡಿಕೊಡುತ್ತದೆ. ಪಾಂಗಾಂಗ್ ಸರೋವರದ ಉತ್ತರ ಭಾಗದಲ್ಲೂ ಚೀನಾ ಕೇಬಲ್ ಹಾಕುತ್ತಿದ್ದುದನ್ನು ಭಾರತದ ಗುಪ್ತಚರ ಸಂಸ್ಥೆಗಳು ಕಳೆದ ತಿಂಗಳಷ್ಟೇ ಪತ್ತೆ ಹಚ್ಚಿದ್ದವು.

ಲಡಾಖ್ ಗಡಿಭಾಗದಲ್ಲಿ ಚೀನಾ ಮಾರ್ಚ್ ತಿಂಗಳಿಗೂ ಮುಂಚಿನಿಂದಲೇ ಕಿತಾಪತಿ ಪ್ರಾರಂಭ ಮಾಡಿತ್ತೆನ್ನಲಾಗಿದೆ. ಪಾಕಿಸ್ತಾನ ಜನವರಿಯಿಂದ ಕದನವಿರಾಮ ಉಲ್ಲಂಘನೆ ಮಾಡುತ್ತಾ ಬಂದಿದೆ. ಎರಡೂ ದೇಶಗಳು ಹೆಚ್ಚೂಕಡಿಮೆ ಒಟ್ಟಿಗೇ ತಂಟೆಕೋರತನ ತೋರುತ್ತಿದೆ.

ರಾಜಕೀಯವಾಗಿ ಮತ್ತು ವ್ಯಾವಹಾರಿಕವಾಗಿ ಚೀನಾ ಮತ್ತು ಪಾಕಿಸ್ತಾನದ ಮಧ್ಯೆ ಗಾಢ ಸ್ನೇಹ ಬೆಳೆದಿದೆ. ಪಾಕಿಸ್ತಾನಕ್ಕೆ ಎಲ್ಲಾ ರೀತಿಯಲ್ಲೂ ಚೀನಾ ಸಹಾಯ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲೆ ಎರಗಿಬೀಳಲು ಎರಡೂ ದೇಶಗಳು ಒಟ್ಟಿಗೆ ಕೈ ಜೋಡಿಸಿದ್ದರೆ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ.

 

Comments are closed.