ಅಂತರಾಷ್ಟ್ರೀಯ

ಅಮೆರಿಕ: ಬೃಹತ್ ಕಾಡ್ಗಿಚ್ಚು ನಂದಿಸಲು 16,000 ಸಿಬ್ಬಂದಿ ಕಾರ್ಯಾಚರಣೆ – ನಾಳೆ ಟ್ರಂಪ್ ಕ್ಯಾಲಿಫೋರ್ನಿಯಾಗೆ ಭೇಟಿ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ವಾಶಿಂಗ್ಟನ್, ಸೆಪ್ಟಂಬರ್.13: ಅಮೆರಿಕದ ಕರಾವಳಿ ಭಾಗದಲ್ಲಿ ಉಂಟಾಗಿರುವ ಬೃಹತ್ ಕಾಡ್ಗಿಚ್ಚನ್ನು ನಂದಿಸುವ ಪ್ರಯತ್ನ ಮುಂದುವರಿದಿದ್ದು, ‘ಕ್ಯಾಲಿಫೋರ್ನಿಯಾದ ಸುಮಾರು 28 ಭಾಗಗಳಲ್ಲಿ ಹಬ್ಬಿರುವ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಇಲಾಖೆಯ 16,000 ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈಗಾಗಲೇ ಕಾಳ್ಗಿಚ್ಚಿನ ಜ್ವಾಲೆಯಿಂದಾಗಿ 30 ಮಂದಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಎನ್‌ಬಿಸಿ ವರದಿ ಮಾಡಿದೆ. ‘ಸಮಯಕ್ಕೆ ಸರಿಯಾಗಿ ಎಚ್ಚರಿಕೆಯ ಸಂದೇಶ ಪಡೆಯದ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾಧ್ಯವಾಗದ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ’ ಎನ್ನಲಾಗಿದೆ.

5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇದೇ ವೇಳೆ ಕ್ಯಾಲಿಫೋರ್ನಿಯ, ಒರೆಗಾನ್ ಮತ್ತು ವಾಶಿಂಗ್ಟನ್ ರಾಜ್ಯಗಳ ಉದ್ದಗಲಕ್ಕೂ ಬೆಂಕಿ ಹಬ್ಬಿದ್ದು, ಅವುಗಳ ಹೆಚ್ಚಿನ ಭಾಗಗಳು ಬಾಹ್ಯ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಳ್ಗಿಚ್ಚಿನಿಂದಾಗಿ ಕ್ಯಾಲಿಫೋರ್ನಿಯಾ, ಒರೆಗಾನ್‌ ಮತ್ತು ವಾಷಿಂಗ್ಟನ್‌ ಭಾಗದ ಸುಮಾರು ಹತ್ತು ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ಬಿಸಿ ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಉಪಕಾರ್ಯದರ್ಶಿ ಜುದ್ ದೀರೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Comments are closed.