
ಮಂಗಳೂರು : ಮಂಗಳೂರು ಅರಣ್ಯ ಸಂಚಾರಿ ದಳ (ಫಾರೆಸ್ಟ್ ಸ್ಕ್ವಾಡ್) ದ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಯಾದಗಿರಿಯಲ್ಲಿ ಕಾರ್ಯಾಚರಣೆ ನಡೆಸಿ ಕೃಷ್ಣ ಮೃಗದ ಚರ್ಮದ ಬೃಹತ್ ದಂಧೆಯನ್ನು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಸೊತ್ತು ಸಮೇತಾ ಬಂಧಿಸಿದ್ದಾರೆ.

ಈ ಬೃಹತ್ ಕಾರ್ಯಾಚರಣೆ ವೇಳೆ 20 ಕೃಷ್ಣ ಮೃಗದ ಚರ್ಮ, 2 ಕೃಷ್ಣ ಮೃಗದ ಟ್ರೋಫಿ (ತಲೆಯ ಭಾಗ), ಒಂದು ಜೀವಂತ ಹೆಣ್ಣು ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ ಈ ಸೊತ್ತುಗಳನ್ನು ಹೊಂದಿದ್ದರು ಎಂಬ ಮಾಹಿತಿ ಲಭಿಸಿದೆ. ವಶಪಡಿಸಿಕೊಂಡಿರುವ ಸೊತ್ತುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ಎಡಿಜಿಪಿ ಡಾ.ರವೀಂದ್ರನಾಥ್, ಐಪಿಎಸ್, ಮಡಿಕೇರಿ ಅರಣ್ಯ ಸಂಚಾರಿ ದಳದ ಎಸ್ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಫಾರೆಸ್ಟ್ ಸ್ಕ್ವಾಡ್ ನ ಸಬ್ ಇನ್ಸ್‌ಪೆಕ್ಟರ್ ಪುರುಷೋತ್ತಮ, ಹೆಡ್ ಕಾನ್ಸ್‌ಟೇಬಲ್ ಜಗನ್ನಾಥ, ಸಿಬ್ಬಂದಿಗಳಾದ ಪ್ರವೀಣ್ ಜೆ, ಉದಯ ಕುಮಾರ್, ಮಹೇಶ್, ಶಿವಾನಂದ ಜಗದೀಶ್ ಪಾಲ್ಗೊಂಡಿದ್ದರು.
Comments are closed.