ಮಂಗಳೂರು : ‘ತುಳು ಭಾಷೆಯಲ್ಲಿ ಬಂದ ಸಾಹಿತ್ಯ ಕೃತಿಗಳಲ್ಲಿ ಮಂದಾರ ರಾಮಾಯಣ ಮೇಲ್ಮಟ್ಟದ್ದು. ಅದು ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ. ತುಳು ನೆಲದ ಸಮೃದ್ಧ ಬದುಕನ್ನು ಎಸಳೆಸಳಾಗಿ ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ ಮಂದಾರ ಕೇಶವ ಭಟ್ಟರು ನಮ್ಮ ಕಾಲದಲ್ಲಿ ಜೀವಿಸಿದ್ದ ಮಹಾಕವಿ ಎಂಬುದು ತುಳುವರ ಹೆಮ್ಮೆ’ ಎಂದು ವಿಶ್ರಾಂತ ಪ್ರಾಚಾರ್ಯ ಮತ್ತು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ತುಳುವರ್ಲ್ಡ್ (ರಿ.) ಕುಡ್ಲ ಇವರು ತಮ್ಮ ಕಾವ್ಯಯಾನದ ನಾಲ್ಕನೇ ಸರಣಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನಗರದ ಉರ್ವ ಸ್ಟೋರ್ ತುಳು ಭವನದ ಸಿರಿ ಚಾವಡಿಯಲ್ಲಿ ಏರ್ಪಡಿಸಿದ್ದ ‘ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು’ ಪಾರಾಯಣ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿ ಪ್ರವಚನಕಾರರಿಗೆ ಮಂದಾರ ರಾಮಾಯಣ ಕೃತಿ ಸಮರ್ಪಿಸಿ ಸಪ್ತಾಹದ ಮಂಗಳಾಚರಣೆಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರು ‘ಕರಾಡ ಮರಾಠಿ ಮನೆಮಾತಾದ ಕೇಶವ ಭಟ್ಟರು ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರೂ ತುಳು ಭಾಷೆಯಲ್ಲಿ ಕಾವ್ಯ ರಚಿಸಿ ಖ್ಯಾತರಾದುದು ಸಾರಸ್ವತ ಲೋಕದ ವಿಸ್ಮಯ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮಾತನಾಡಿ ‘ಎರಡು ಬಾರಿ ಮುದ್ರಣಗೊಂಡಿರುವ ಮಂದಾರ ರಾಮಾಯಣದ ಪ್ರತಿಗಳೆಲ್ಲ ಮುಗಿದಿದ್ದು ಅಕಾಡೆಮಿಯ ಮುಂದಿನ ಅನುದಾನದಲ್ಲಿ ಅದರ ಮರುಮುದ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡ್ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಮಂದಾರ ಕೇಶವ ಭಟ್ಟ ಅವರ ಪುತ್ರಿ ಕು. ಶಾರದಾಮಣಿ ಅವರನ್ನು ಅಕಾಡೆಮಿ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ದುಡಿದ ಅಕಾಡೆಮಿ ಸಿಬ್ಬಂದಿಗಳು ಹಾಗೂ ತುಳು ವರ್ಲ್ಡ್ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯ, ತುಳು ಕಾವ್ಯಯಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು.
ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು.ಸಂಚಾಲಕ ಮಾಧವ ಭಂಡಾರಿ ಕಲಾವಿದರನ್ನು ಪರಿಚಯಿಸಿ ವಂದಿಸಿದರು. ತುಳು ಅಕಾಡೆಮಿ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ಚೇತಕ್ ಪೂಜಾರಿ, ಮಂದಾರ ಕುಟುಂಬದ ರಾಜೇಶ್ ಭಟ್, ಪ್ರಮೋದ್ ಸಪ್ರೆ ಹಾಗೂ ಮಂದಾರ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
‘ನೀಲದುಂಗಿಲ’- ಸುಗಿಪು ದುನಿಪು:
ಮಂದಾರ ರಾಮಾಯಣದ ‘ನೀಲ ದುಂಗಿಲ’ ಕಾವ್ಯ ಭಾಗವನ್ನು ಪ್ರಶಾಂತ ರೈ ಪುತ್ತೂರು ಮತ್ತು ಅಮೃತ ಅಡಿಗ ಪಾಣಾಜೆ ವಾಚಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರವಚನ ಮಾಡಿ ಮಂಗಳಾಚರಣೆಗೈದರು.
Comments are closed.