
ಉತ್ತರಪ್ರದೇಶ: ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರದ ಭೀಕರತೆ ಇನ್ನೂ ಕಣ್ಣಿಂದ ಮಾಸುವ ಮುನ್ನವೇ ಮತ್ತೊಂದು ಇಂತಹದೇ ಹೇಯ ಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದು, ನಂತರ ಆಕೆಯ ಕಣ್ಣನ್ನು ಕಿತ್ತು, ನಾಲಿಗೆ ಕತ್ತರಿಸಿ ಕೊಂದು ಹಾಕಿ ವಿಕೃತಿ ಮೆರೆದಿದ್ದಾರೆ. ಕಾಣೆಯಾದ ತಮ್ಮ ಮಗಳನ್ನು ಎಲ್ಲೆಡೆ ಹುಡುಕಿದಾಗ ಆಕೆ ಸಿಕ್ಕಿಲ್ಲ. ನಂತರ ಊರಾಚೆಯ ಇಸಾನಗರದ ಕಬ್ಬಿನ ಗದ್ದೆಯಲ್ಲಿ ಆಕೆಯ ಮೃತದೇಹ ಭಯಾನಕ ರೀತಿಯಲ್ಲಿ ಪತ್ತೆಯಾಗಿದೆ.
ಘಟನೆ ವರದಿಯಾಗ್ತಿದ್ದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳನ್ನು ಗಲ್ಲಿಗೇರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಗ್ರಹಿಸುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಲಖೀಂಪುರ ಖೇರಿ ಎಸ್‌ಪಿ ಸತ್ಯೇಂದ್ರ ಕುಮಾರ್ ತಿಳಿಸಿದ್ದಾರೆ.
ಮೃತ ಬಾಲಕಿಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಆಗಿರುವುದು ದೃಢಪಟ್ಟಿದ್ದು, ಸಂತೋಷ್ ಯಾದವ್ ಮತ್ತು ಸಂಜಯ್ ಗೌತಮ್ ಎಂಬ ಇಬ್ಬರು ಆರೋಪಿಗಳನ್ನು ಜೈಲಿಗಟ್ಟಲಾಗಿದೆ. ಇತ್ತ ಈ ಹೇಯ ಕೃತ್ಯ ನಡೆಯುತ್ತಿದ್ದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಮಾಜವಾದಿ ಮತ್ತು ಬಿಜೆಪೆಯೇತರ ಪಕ್ಷಗಳು ವಾಗ್ದಾಳಿ ನಡೆಸಿದ್ದಾರೆ.
Comments are closed.