ಕರಾವಳಿ

ಹಿಂದೂ ಯುವ ಸೇನೆಯ ಮುಖಂಡ ಎಕ್ಕೂರು ಬಾಬಾ ವಿಧಿವಶ

Pinterest LinkedIn Tumblr

ಮಂಗಳೂರು: ಒಂದು ಕಾಲದಲ್ಲಿ ದಕ್ಶಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ ಭೂಗತ ಚಟುವಟಿಕೆಗಳಲ್ಲಿ ಪಾಲ್ಗೊಂಡು ಖ್ಯಾತರಾಗಿ, ಬಳಿಕ ಮನಪರಿವರ್ತನೆಗೊಂಡು ಸಮಾಜದ ಮುಖ್ಯವಾಹಿನಿಗೆ ಮರಳಿದ್ದ ಎಕ್ಕೂರು ಬಾಬಾ ಎಂದೇ ಪ್ರಸಿದ್ಧರಾಗಿದ್ದ ಹಿಂದೂ ಯುವ ಸೇನೆಯ ಮುಖಂಡ, ಸಾಮಾಜಿಕ ಕಾರ್ಯಕರ್ತ ನಗರದ ಎಕ್ಕೂರು ನಿವಾಸಿ ಶುಭಕರ ಶೆಟ್ಟಿ ಅವರು ಆಗಸ್ಟ್ 14ರ ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಹಿಂದೂ ಯುವ ಸೇನೆಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಶುಭಕರ ಶೆಟ್ಟಿ ಯಾನೆ ಎಕ್ಕೂರು ಬಾಬಾ ಅವರು ಕೆಲವು ವರ್ಷಗಳ ಹಿಂದೆ ಮನಪರಿವರ್ತನೆಗೊಂಡು ಭೂಗತ ಚಟುವಟಿಕೆಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿದ್ದರು. ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಎಕ್ಕೂರು ಬಾಬಾ ಅವರು ಸಾಮಾಜಿಕ ಚಟುವಟಿಕೆಗಳ ಮೂಲಕ ಹೆಸರು ಪಡೆದಿದ್ದರು.

ಎಕ್ಕೂರು ಬಾಬಾ ಅವರು ಮಧುಮೇಹ ಸಹಿತ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೆಲಸಮಯದಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರದಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವಾರ ಎಕ್ಕೂರು ಬಾಬಾ ಅವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಇದೀಗ ಅವರ ಸಾವಿನ ಬೆನ್ನಲ್ಲೇ ಎಕ್ಕೂರು ಬಾವಾ ಅವರು ಕೂಡ ನಿಧನರಾಗಿದ್ದಾರೆ. ಬಾಬಾ ಅವರ ನಿಧನಕ್ಕೆ ಹಲವಾರು ಮಂದಿ ಅಭಿಮಾನಿಗಳು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಲತಾಣಗಳಲ್ಲಿ ಅವರ ಫೋಟೊ ಹಾಕಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 15ರಂದು ಬೆಳಿಗ್ಗೆ ಅಂತ್ಯಕ್ರಿಯೆ:

ಶುಕ್ರವಾರ ಮೃತರಾದ ಹಿಂದೂ ಯುವ ಸೇನೆಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಎಕ್ಕೂರು ಬಾಬಾ ಅವರ ಅಂತ್ಯಕ್ರಿಯೆಯು ಶನಿವಾರ ನಡೆಯಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಎಕ್ಕೂರು ಅಯ್ಯಪ ಭಜನಾ ಮಂದಿರ ವಠಾರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಯುವಸೇನೆಯ ಮುಖಂಡರು ತಿಳಿಸಿದ್ದಾರೆ.

Comments are closed.