ಕರಾವಳಿ

ಭೂಮಿ ಪೂಜೆಯ ಭವ್ಯ ಐತಿಹಾಸಿಕ ಕ್ಷಣ: ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ(ವಿಡೀಯೋ)

Pinterest LinkedIn Tumblr

ಮಂಗಳೂರು, ಆಗಸ್ಟ್.05 : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆ ಸಂದರ್ಭ ಇಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲಕ್ಕೆ ಶಿಲಾನ್ಯಾಸ ನಡೆಸುತ್ತಿರುವ ಐತಿಹಾಸಿಕ ಕ್ಷಣದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಂಭ್ರಮಾಚರಣೆ ಗಮನ ಸೆಳೆಯಿತು.

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆಯ ಭವ್ಯ ಐತಿಹಾಸಿಕ ಕ್ಷಣವನ್ನು ನಾಡಿನಾದ್ಯಂತ ಜನರು ಬಹಳ ವಿಶೇಷ ರೀತಿಯಲ್ಲಿ ಆಚರಿಸಿದರು. ಇದೇ ವೇಳೆ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಸಂದರ್ಭ ವಿಶ್ವಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸುರಿಯುತ್ತಿದ್ದ ಭಾರೀ ಮಳೆಯನ್ನು ಲೆಕ್ಕಿಸದೇ ನಾಸಿಕ್ ಬ್ಯಾಂಡ್ ನ ಮುಗಿಲು ಮುಟ್ಟುವ ಶಬ್ದಕ್ಕೆ ಕುಣಿದು ಸಂಭ್ರಮಿಸಿದರು.

ಈ ವೇಳೆ ಕಾರ್ಯಕ್ರಮಕ್ಕೆ ಅವಧಿಗೂ ಮುನ್ನ ಆಗಮಿಸಿದಂತಹ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್​ ಅವರು, ಇಂದು ಭವ್ಯತೆ ಹಾಗೂ ಧನ್ಯತೆ ತುಂಬಿರುವ ದಿನವಾಗಿದೆ. ಇದು ಬಿಜೆಪಿಯ ಸಂಕಲ್ಪ ಈಡೇರಿದ ಸಂದರ್ಭ. ಈ ಐತಿಹಾಸಿಕ ಸಮಯಕ್ಕಾಗಿ ಕೋಟಿ ಕೋಟಿ ಹಿಂದೂಗಳು ಶತಶತಮಾನಗಳಿಂದ ಹತ್ತಾರು ಪೂಜೆ ಪ್ರಾರ್ಥನೆಗಳನ್ನು ಮಾಡಿದ್ದಾರೆ. ‌ಈ ದಿನಕ್ಕಾಗಿ ಕೈ ಜೋಡಿಸಿರುವ ಸಾಧು-ಸಂತರು, ಸಜ್ಜನರು, ಹೋರಾಟಗಾರರು, ಕರಸೇವಕರು, ರಾಜಕಾರಣಿಗಳ ಸಂಕಲ್ಪ ಈಡೇರಿದ ಭವ್ಯ ಐತಿಹಾಸಿಕ ದಿನ ಇಂದು ಎಂದು ಅವರು ಹೇಳಿದರು.

ಭಜನಾ ಕಾರ್ಯಕ್ರಮದಲ್ಲಿ ಗಮನ ಸೆಳೆದ ಕಟಿಲ್ – ಕಾಮಾತ್‌ರ ಚಪ್ಪಾಳೆಯಾ ತಾಳ ಹಾಗೂ ತಬಲಾ ಮೇಳ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಪ್ರಯುಕ್ತ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಗಮನ ಸೆಳೆದರು.

ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಕಾರ್ಯಕ್ರಮಕ್ಕೂ ಮುನ್ನ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಭಜನೆಯಲ್ಲಿ ನಳಿನ್‌ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಇಬ್ಬರೂ ನಾಯಕರು ಪಾಲ್ಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಜನೆಯಲ್ಲಿ ಪಾಲ್ಗೊಂಡು ಭಜನೆ ಹಾಡುತ್ತಾ ಚಪ್ಪಾಳೆ ತಾಳ ಹಾಕಿದರು. ಇದೇ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ತಬಲಾ ನುಡಿಸುತ್ತಾ ಭಜನೆ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುಂಚೆ ನಡೆದ ಈ ಭಜನಾ ಕಾರ್ಯಕ್ರಮದಲ್ಲಿ ಶಾಸಕರ ತಬಲಾಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಚಪ್ಪಾಳೆಯ ತಾಳ ಗಮನ ಸೆಳೆಯಿತು.

__ ಸತೀಶ್ ಕಾಪಿಕಾಡ್

Comments are closed.