ಕರಾವಳಿ

ಶೀಘ್ರದಲ್ಲೇ ಕಾಂಗ್ರೇಸ್ ಮುಕ್ತ ದೇಶ ನಿರ್ಮಾಣ :ಎಂಎಲ್ಸಿ ಪ್ರತಾಪಸಿಂಹ ನಾಯಕ್

Pinterest LinkedIn Tumblr

ಮಂಗಳೂರು / ಬೆಳ್ತಂಗಡಿ: ಕೋರೋನಾದಂತಹ ವಿಪತ್ತಿನ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಾಂಗ್ರೇಸ್ ಮುಖಂಡರು ಆಧಾರ ರಹಿತ ಆರೋಪಗಳನ್ನು ಮಾಡುವುದರ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.

ಶುಕ್ರವಾರ ಜಿಲ್ಲೆಗೆ ಭೇಟಿ ಕೊಟ್ಟ ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಲೆಕ್ಕ ಕೇಳುವ ಭ್ರಮೆ ಹಿಡಿದಿದೆ. ಅವರ ಅಕ್ರಮ ಸಂಪತ್ತಿನ ಬಗ್ಗೆ ಸಿಬಿಐಯು ಲೆಕ್ಕ ಕೇಳಿತ್ತು. ಹೀಗಾಗಿ ಅವರಿಗೆ ಈಗ ನಿದ್ದೆಯಲ್ಲಿ ಹಾಗು ನಿದ್ದೆಯಿಂದ ಎದ್ದಾಗ ಲೆಕ್ಕದ ನೆನಪೇ ಬರುತ್ತಿದೆ. ಅಂದು ಸುಳ್ಯದ ಜನಸಾಮಾನ್ಯರೊಬ್ಬರು ವಿದ್ಯುತ್ ಲೆಕ್ಕ ಕೇಳಿದಾಗ, ಅವರನ್ನು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಪೋಲಿಸರ ಮೂಲಕ ಹಿಂಸೆ ಕೊಟ್ಟದ್ದು ಜಿಲ್ಲೆಯ ಜನ ಇನ್ನೂ‌ ಮರೆತಿಲ್ಲಾ. ಹೀಗಾಗಿ ಇಂತಹ ನಾಯಕರಿಂದ ಹೆಚ್ಚಿನದೇನೂ ನಿರೀಕ್ಷೆ‌ ಮಾಡಲು ಸಾಧ್ಯವಿಲ್ಲ.

ರಾಷ್ಟ್ರೀಯ ಸಮಸ್ಯೆಯೇ ಇರಲಿ, ರಾಜ್ಯದ್ದೇ ಇರಲಿ ಕಾಂಗ್ರೇಸ್ ನವರಿಗೆ ಸ್ವ ಹಿತಾಸಕ್ತಿಯೇ ಮೇಲಾಗಿದೆ. ಪ್ರಧಾನ ಮಂತ್ರಿಗಳೋ, ಮುಖ್ಯಮಂತ್ರಿಗಳೋ ಚರ್ಚೆಗೆ ವೇದಿಕೆ ಸಿದ್ಧಪಡಿಸಿದರೆ ಇವರು ಬೆನ್ನು ತೋರಿಸುತ್ತಾರೆ. ಇವರ ಹೇಳಿಕೆಗಳನ್ನು ಆಧಾರವಾಗಿಟ್ಟು ಕೊಂಡು ಪಾಕಿಸ್ತಾನ, ಚೀನಾ ದೇಶಗಳು ಸ್ಪಂದಿಸುವಂತಹ ಸ್ಥಿತಿ ಇದೆ. ಇದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದೆ.

ಜೀವದ ಹಂಗಿಲ್ಲದೆ ಗಡಿರಕ್ಷಣೆ ಮಾಡುವ ಸೈನಿಕರ ಬಗ್ಗೆಯೂ ಅಪಸ್ವರ ಎತ್ತುತ್ತಾರಲ್ಲದೆ ಸಾಕ್ಷ ಕೇಳುತ್ತಾರೆ. ದೇಶದ ಭದ್ರತೆಯನ್ನು ಹೆಚ್ಚಿಸುವ ರಫೇಲ್ ಯುದ್ಧ ವಿಮಾನಗಳ ಬಗ್ಗೆಯೂ ಕಾಂಗ್ರೇಸ್ ಪಕ್ಷ ಆಕ್ಷೇಪ ಎತ್ತುತ್ತಿದೆ. ಇವರು ಮಾಡುವುದಿಲ್ಲ, ಬೇರೆಯವರಿಗೆ ಮಾಡುವುದಕ್ಕೂ ಬಿಡುವುದಿಲ್ಲ. ವಸಾಹತು ಶಾಹಿ ಮಾನಸಿಕತೆಯ ಸ್ಥಿತಿ ಆ ಪಕ್ಷದ್ದಾಗಿದೆ.

ಈಗಾಗಲೇ ಜನಸಾಮಾನ್ಯರು ಕಾಂಗ್ರೇಸ್ ಪಕ್ಷವನ್ನು ತಿರಸ್ಕರಿಸುತ್ತಾ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶವು ಕಾಂಗ್ರೇಸ್ ಮುಕ್ತವಾಗುವುದರಲ್ಲಿ ಸಂಶಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.

Comments are closed.