ಕರಾವಳಿ

ರಾಜ್ಯ ಸರಕಾರದಿಂದ ಕೋವಿಡ್ ಭ್ರಷ್ಟಾಚಾರ: ಎಸ್‌ಡಿಪಿಐ ಆರೋಪ -ತನಿಖೆಗೆ ಆಗ್ರಹ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಕೋವಿಡ್ ಸಾಂಕ್ರಾಮಿಕ ರೋಗದ ಚಿಕಿತ್ಸೆಗೆಂದು ವೈದ್ಯಕೀಯ ಉಪಕರಣಗಳು ಹಾಗೂ ಬಳಕೆ ಸಾಮಾಗ್ರಿಗಳನ್ನು ಖರೀದಿಸಿರುವುದರಲ್ಲಿ ರೂ 2000 ಕೋಟಿಯ ಹಗರಣ ನಡೆಸಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿದೆಯಲ್ಲದೆ ಆಹಾರ ಕಿಟ್‌ಗಳ ಪೂರೈಕೆಯಲ್ಲೂ ದುರುಪಯೋಗವಾಗಿದೆ. ಕೋವಿಡ್ ಸಾಂಕ್ರಾಮಿಕ ದಿಂದ ಜನತೆ ಆತಂಕದಿಂದ ಇರುವ ಸಂದರ್ಭದಲ್ಲೇ ಜನತೆಯ ಹಣವನ್ನು ದೋಚಿದ ಸರಕಾರ ರಾಜ್ಯವನ್ನು ಲೂಟಿಗೈಯುತ್ತಿದೆ. ಈ ಬಗ್ಗೆ ಜಂಟಿ ಸದನ ಸಮಿತಿಯಿಂದ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ರಾಜ್ಯದ ಹಲವೆಡೆಗಳಲ್ಲಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತ್ತು. ರಾಜ್ಯದ ವಿರೋಧ ಪಕ್ಷಗಳು ಕೂಡ ಇದೇ ನಿಲುವನ್ನು ತಾಳಿದೆ. ಆದರೂ ರಾಜ್ಯದ ಬಿಜೆಪಿ ಸರಕಾರ ಈ ಬಗ್ಗೆ ತನಿಖೆ ನಡೆಸಲು ಹಿಂಜರಿಯುತ್ತಿದೆ. ಕೇವಲ ಪತ್ರಿಕಾಗೋಷ್ಠಿ ಕರೆದು “ಸಾಬೀತುಪಡಿಸಿ” ಎಂದು ಬೇಜವಾಬ್ದಾರಿ ತನವನ್ನು ಪ್ರದರ್ಶಿಸುತ್ತಿದೆ. ಇಷ್ಟೊಂದು ಗುರುತರವಾದ ಆರೋಪ ಕೇಳಿಬಂದಾಗ ಜನತೆಯನ್ನು ಕಡೆಗಣಿಸಿ ಯಾವುದೇ ರೀತಿಯ ತನಿಖೆಗೆ ಮುಂದಾಗದೇ ಇರುವುದು ಖಂಡನೀಯ.

ರಾಜ್ಯದ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಗ್ಗೆ ಶಕ್ತಿಯುತವಾದ ಹೋರಾಟ ನಡೆಸುವುದರ ಬದಲಾಗಿ ಕೇವಲ ಪತ್ರಿಕಾ ಹೇಳಿಕೆಗೆ ಮತ್ತು ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತ ಗೊಂಡಿರುವುದು ಕೂಡ ಪ್ರಶ್ನಾರ್ಹವಾಗಿದೆ. ವಿರೋಧಪಕ್ಷಗಳಾಗಿದ್ದುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಪ್ರತಿಪಕ್ಷಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ಖಂಡನೀಯ.

ರಾಜ್ಯದ ಮುಖ್ಯಮಂತ್ರಿಗಳು ತಕ್ಷಣವೇ ಜಂಟಿ ಸದನ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಬೇಕು ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಅಬ್ದುಲ್ ಜಲಿಲ್ ಕೆ.,ಅಕ್ರಮ್ ಹಸನ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಮ್.ಆರ್ ಉಪಸ್ಥಿತರಿದ್ದರು.

Comments are closed.