ಕರಾವಳಿ

ಉಡುಪಿ: ಕುಡಿದ ಮತ್ತಿನಲ್ಲಿ ಗೆಳೆಯನನ್ನೇ ಕೊಂದು ಸುಡಲು ಹೋದ ಕಿರಾತಕ ಅಂದರ್!

Pinterest LinkedIn Tumblr

ಉಡುಪಿ: ಕುಡಿದ ಮತ್ತಿನಲ್ಲಿ ಗೆಳೆಯನನ್ನೇ ಹೊಡೆದು ಕೊಲೆ ಮಾಡಿ ಬಳಿಕ ಮೃತ ದೇಹವನ್ನು ಮನೆಯಂಗಳದಲ್ಲಿ ಸುಡಲು ಹೊರಟ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪುಂಚಲಕಾಡು ಎಂಬಲ್ಲಿ ಈ ಘಟನೆ ನಡೆದಿದೆ.

ಸ್ನೇಹಿತನನ್ನೇ ಕೊಂದು ಮನೆ ಮುಂದೆಯೇ ಮೃತ ದೇಹವನ್ನು ‌ಸುಡಲು ಯತ್ನಿಸಿದ ಆರೋಪಿ ಪುಂಚಲಕಾಡು ನಿವಾಸಿ ಅಲ್ಬನ್ ಡಿಸೋಜ(50) ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಬಸ್ ಚಾಲಕನಾಗಿದ್ದ ಮೂಳೂರು ಐದು ಸೆಂಟ್ಸ್ ನಿವಾಸಿ ಹೇಮಂತ್ ಪೂಜಾರಿ‌ ಅಲ್ಬನ್ ಎಂಬತಾನಿಂದ ಕೊಲೆಯಾದ ವ್ಯಕ್ತಿ.

ಹೇಮಂತ್ ಮತ್ತು ಅಲ್ಬನ್ ಇಬ್ಬರು ಗೆಳೆಯರಾಗಿದ್ದು ದಿನವೂ ಜೊತೆಗೆ ‌ಕುಡಿಯುತ್ತಿದ್ದರು. ಶುಕ್ರವಾರವೂ ಕೂಡ ಪುಂಚಲಕಾಡುವಿನ ಬಾರಿನಲ್ಲಿ ಕುಡಿದ ಬಳಿಕ ಅಲ್ಬನ್ ಡಿಸೋಜಾ ಮನೆ ತೆರಳಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಜಗಳ ನಡೆದು ಅಲ್ಬನ್ಹೇಮಂತನಿಗೆ ಹೊಡೆದು ಕೊಂದಿದ್ದಾನೆ. ಬಳಿಕ ಕುಡಿದ ಅಮಲಿನಲ್ಲಿ ಮನೆಯ ಅಂಗಳದಲ್ಲಿ ಮೃತ ದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಸುಟ್ಟ ವಾಸನೆ ಹಾಗೂ ದಟ್ಟ ಹೊಗೆ ಬರುತ್ತಿರುವುದು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆಗಮಿಸುವಷ್ಟರಲ್ಲಿ ಭಾಗಶಃ ಶವ ಸುಟ್ಟು ಕರಕಲಾಗಿತ್ತೆನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಶಿರ್ವ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Comments are closed.