ಕರಾವಳಿ

ಪುಣಿಂಚಿತ್ತಾಯರು ತುಳು ಭಾಷೆಯ ಮಹಾಪಂಡಿತ : ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ತುಳು ಅಕಾಡೆಮಿಯಲ್ಲಿ ಹಿರಿಯ ತುಳು ಲಿಪಿ ಸಂಶೋಧಕ, ಸಾಹಿತಿ ಡಾ. ವೆಂಕಟ್ರಾಜ ಪುಣಿಂಚತ್ತಾಯರ ‘ನೆಂಪು’ ಕಾರ್ಯಕ್ರಮ

ಮಂಗಳೂರು: ಹಿರಿಯ ತುಳು ಲಿಪಿ ಸಂಶೋಧಕ, ಸಾಹಿತಿ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಎಂಟನೇ ಪುಣ್ಯತಿಥಿ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಿರಿ ಚಾವಡಿಯಲ್ಲಿ ಜರಗಿದ ‘ನೆಂಪು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ದೀಪ ಬೆಳಗಿ ಉದ್ಘಾಟಿಸಿದರು.

ಸಂಸ್ಮರಣಾ ಭಾಷಣ ಮಾಡಿ ಮಾತಾಡಿದ ಅವರು ‘ವೆಂಕಟ್ರಾಜ ಪುಣಿಂಚತ್ತಾಯರು ತುಳು ಭಾಷೆಯ ಮಹಾ ಪಂಡಿತರು. ಕನ್ನಡ,ತುಳು,ಸಂಸ್ಕೃತ ಮತ್ತು ಮಳೆಯಾಲಂ ಗಳಲ್ಲಿ ತಜ್ಞರಾಗಿದ್ದ ಅವರು ಇಪ್ಪತ್ತೇಳು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರು ಸಂಶೋಧಿಸಿದ ನಾಲ್ಕು ತಾಡವಾಲೆ ಗ್ರಂಥಗಳು ಪ್ರಾಚೀನ ತುಳು ಲಿಪಿ ಮತ್ತು ಸಾಹಿತ್ಯದ ಮೈಲಿಗಲ್ಲುಗಳು. ಹಲವು ಲಿಪಿ ಸಂಶೋಧಕರಿಗೆ ಅದು ಪ್ರೇರಣೆ ನೀಡಿದೆ ‘ ಎಂದರು.

ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಅಧ್ಯಕ್ಷತೆ ವಹಿಸಿದ್ದರು. ತುಳು ವರ್ಲ್ಡ್ ನ ಡಾ.ರಾಜೇಶ್ ಆಳ್ವ ಮತ್ತು ರಂಗನಟ ಪ್ರಶಾಂತ್ ಸಿ.ಕೆ. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪುಣಿಂಚತ್ತಾಯರ ಭಾವ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

‘ಪಗರಿದ ಸಂಕ’ ತಾಳಮದ್ದಳೆ :

ಕಾರ್ಯಕ್ರಮದ ಅಂಗವಾಗಿ ಯೂ ಟ್ಯೂಬ್ ನೇರಪ್ರಸಾರದಲ್ಲಿ ಹರೀಶ್ ಶೆಟ್ಟಿ ಸೂಡ ವಿರಚಿತ ‘ಪಗರಿದ ಸಂಕ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ದಯಾನಂದ ಕತ್ತಲ್ ಸಾರ್ ಮತ್ತು ಪ್ರಶಾಂತ್ ಸಿ.ಕೆ. ಅರ್ಥಧಾರಿಗಳಾಗಿದ್ದರು.

ಭಾಗವತರಾಗಿ ದಯಾನಂದ ಕೋಡಿಕಲ್ ಹಾಗೂ ಹಿಮ್ಮೇಳದಲ್ಲಿ ಕೃಷ್ಣರಾಜ ನಂದಳಿಕೆ ಮತ್ತು ರಾಜೇಶ್ ಕುತ್ಪಾಡಿ ಸಹಕರಿಸಿದರು.

Comments are closed.