ಕರಾವಳಿ

ಜುಲೈ ಅಂತ್ಯದವರೆಗೂ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 2 ಗಂಟೆ ಬಳಿಕ ವ್ಯಾಪಾರ, ವಹಿವಾಟು ಇರಲ್ಲ!

Pinterest LinkedIn Tumblr

ಕುಂದಾಪುರ: ಕೋವಿಡ್-19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸ್ವಯಂ ಜಾಗೃತಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಜು. 13 ಸೋಮವಾರದಿಂದ ಜು.31ರ ತನಕ ಮಧ್ಯಾಹ್ನ 2 ಗಂಟೆಯಿಂದ ಎಲ್ಲ ಚಿಲ್ಲರೆ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಿದ್ದೇವೆ ಎಂದು ವರ್ತಕರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರದ ಹೋಟೆಲ್ ಶರೋನ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿದ್ದಾರೆ.

ರಾಧಾಕೃಷ್ಣ ಅವರು ಮಾತನಾಡಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಾವೆಲ್ಲಾ ಸ್ವಯಂ ಪ್ರೇರಿತವಾಗಿ ಈ ತೀರ್ಮಾನ ಕೈಗೊಂಡು, ಕುಂದಾಪುರದ ಎಲ್ಲಾ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಎಲ್ಲಾ ವರ್ತಕರು ಇದಕ್ಕೆ ಒಪ್ಪಿದ್ದಾರೆ. ಎಲ್ಲಿಯೂ ಬಲವಂತವಿಲ್ಲದೆ ಸ್ವಯಂ ಪ್ರೇರಿತವಾಗಿ ಮಧ್ಯಾಹ್ನ 2 ಗಂಟೆಯ ನಂತರ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಹಕರು ಕೂಡಾ ಇದಕ್ಕೆ ಸ್ಪಂದನೆ ನೀಡಿದ್ದಾರೆ ಎಂದರು.
ಮೆಡಿಕಲ್, ಹಾಲು ಮಾರಾಟ, ಹೋಟೆಲ್‌ಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಕೆಲವು ಬೇಕರಿಗಳಲ್ಲಿ ಹಾಲು ಮಾರಾಟ ಮಾಡುವುದರಿಂದ ಹೊರಗೆ ಇಟ್ಟು ಹಾಲು ಮಾರಲು ಅವಕಾಶವಿರುತ್ತದೆ. ಉಳಿದಂತೆ ಅಂಗಡಿ, ಬೇಕರಿ, ಮೊಬೈಲ್ ಅಂಗಡಿ, ಚಿನ್ನಬೆಳ್ಳಿ ಅಭರಣ ಮಳಿಗೆಗಳು ಬಂದ್ ಇರುತ್ತದೆ. ಗ್ರಾಹಕರು ಕೂಡಾ ನಮಗೆ ಸಹಕಾರ ನೀಡಬೇಕು. ಅಗತ್ಯ ಸಾಮಾಗ್ರಿಗಳನ್ನು ಮಧ್ಯಾಹ್ನ 2 ಗಂಟೆಯ ಒಳಗಡೆ ಖರೀದಿಸಬೇಕು. ಇದರಿಂದ ಸಾಧ್ಯವಾದಷ್ಟು ಮಟ್ಟಿಗೆ ಕೋವಿಡ್ ಸಮುದಾಯಕ್ಕೆ ಹರಡುವುದನ್ನು ತಡೆಯಬಹುದಾಗಿದೆ ಎಂದರು.

ನ್ಯಾಯವಾದಿ ಶ್ರೀಧರ್ ಪಿ.ಎಸ್ ಮಾತನಾಡಿ, ನಗರದ ಎಲ್ಲಾ ವರ್ತಕರ ಅಭಿಪ್ರಾಯ ಪಡೆದುಕೊಂಡೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಇದಕ್ಕೆ ಗ್ರಾಹಕರ ಸಹಕಾರ ಅತೀ ಮುಖ್ಯ. ಈ ಬಗ್ಗೆ ಸಹಾಯಕ ಆಯುಕ್ತರು, ಆರಕ್ಷಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಈ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ವರ್ತಕರ ಸಂಘಟನೆಯನ್ನು ಪುನಃ ಸಂಘಟಿಸುವ ಬಗ್ಗೆ ಚಿಂತನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ವರ್ತಕ ಸಂಘದ ಪ್ರಮುಖರು ತಿಳಿಸಿದರು. ಈ ಸಂದರ್ಭದಲ್ಲಿ ವರ್ತಕರಾದ ವಿಜಯಾನಂದ ಶೆಟ್ಟಿ, ಜ್ಯುವೆಲ್ಲರ್‍ಸ್ ಅಸೋಸಿಯೇಶನ್‌ನ ಸತೀಶ್ ಶೇಟ್, ಪುರಸಭೆ ಸದಸ್ಯ ಅಬು ಮಹಮ್ಮದ್, ತಬ್ರೆಜ್, ಸತೀಶ್ ಶೆಟ್ಟಿ, ಸಂತೋಷ್, ಜಸ್ವಂತ್ ಸಿಂಗ್, ಸುರೇಂದ್ರ ಶೇಟ್ ಹುಸೇನ್ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

ಸ್ವಯಂ ಪ್ರೇರಿತ ಬಂದ್ ಮಾಡುವ ಬಗ್ಗೆ ಸಹಾಯಕ ಆಯುಕ್ತರಾದ ಕೆ. ರಾಜು, ಪೊಲೀಸ್ ಇಲಾಖೆಯವರಿಗೆ ಮನವಿ ಸಲ್ಲಿಸಿದರು.

Comments are closed.