ಕರಾವಳಿ

ಗುರುಪುರ ಗುಡ್ಡ ಕುಸಿತ : ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ವಿತರಣೆ

Pinterest LinkedIn Tumblr

ಮಂಗಳೂರು ಜುಲೈ 07 : ಭಾನುವಾರ ಗುರುಪುರ ಬಳಿ ಗುಡ್ಡ ಕುಸಿದು ಸಾವನ್ನಪ್ಪಿದವರ ಕುಟುಂಬ ಕ್ಕೆ ರಾಜ್ಯ ಸರಕಾರದಿಂದ ತಲಾ ರೂ. 5 ಲಕ್ಷ ಪರಿಹಾರ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ವಿತರಿಸಿದರು.

ಸೋಮವಾರ ಮೃತರ ಮನೆಗೆ ಭೇಟಿ ನೀಡಿದ ಸಚಿವರು, ಪರಿಹಾರ ಚೆಕ್ಕನ್ನು ಮೃತರ ತಂದೆಗೆ ಹಸ್ತಾಂತರಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತಿತರು ಉಪಸ್ಥಿತರಿದರು.

ಘಟನೆಯ ವಿವರ :

ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಭಾನುವಾರ ಮಧ್ಯಾಹ್ನ 2:30 ರ ಸುಮಾರಿಗೆ ಗುಡ್ಡ ಕುಸಿತ ಉಂಟಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಈ ವೇಳೆ ನಾಲ್ಕು ಮನೆಗಳು ನೆಲಸಮವಾಗಿವೆ.

ಗುಡ್ಡ ಕುಸಿತದಲ್ಲಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ಪೊಲೀಸರ ಸಹಾಯದಿಂದ ಸ್ಥಳೀಯರು ಹಾಗೂ ಎನ್ ಡಿ ಅರ್ ಎಫ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಲವು ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಮಕ್ಕಳ ಮೃತದೇಹವನ್ನು ಪತ್ತೆಹಚ್ಚಿ ಹೊರಗೆ ತರಲು ಸಾಧ್ಯವಾಗಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್​ ಕುಮಾರ್​ ಕಟೀಲು, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.. ಇದೇ ವೇಳೆ ಸರ್ಕಾರದಿಂದ ಹೊಸ ಮನೆಗಳನ್ನು ನಿರ್ಮಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕುಟುಂಬಗಳಿಗೆ ನೀಡಿದ್ದರು.

ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದರು.

ಮಾತ್ರವಲ್ಲದೇ ಸಚಿವರು, ಅಧಿಕಾರಿಗಳಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಜಿಲ್ಲಾಡಳಿತದ ಸಕಲ ಪ್ರಯತ್ನದ ಹೊರತಾಗಿಯೂ ಮಕ್ಕಳನ್ನು ರಕ್ಷಿಸಲು ಅಸಾಧ್ಯವಾಗಿದ್ದು, ಇದಕ್ಕೆ ವಿಷಾಧ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಮೃತ ಮಕ್ಕಳ ಕುಟುಂಬಕ್ಕೆ ಈ ಕೂಡಲೇ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು. ಅಲ್ಲದೆ, ಈ ಪ್ರದೇಶದಲ್ಲಿ ಸಿಲುಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಾಗಳಿಗೆ ಸ್ಥಳಾಂತರ ಮಾಡುವಂತೆಯೂ ಸೂಚನೆ ನೀಡಲಾಗಿದೆ ಎಂದಿದ್ದರು.

Comments are closed.