ಕರಾವಳಿ

ಮಂಗಳೂರು : ಕೊರೋನಾಕ್ಕೆ ಇಂದು ಮತ್ತೆ ಇಬ್ಬರು ಬಲಿ – ಉಳ್ಳಾಲ ವ್ಯಾಪ್ತಿಯ ಮಸೀದಿ ವಠಾರದಲ್ಲಿ ದಫನ

Pinterest LinkedIn Tumblr

ಮಂಗಳೂರು, ಜುಲೈ .6: ದ.ಕ.ಜಿಲ್ಲೆಯಲ್ಲಿ ಕೊರೋನಾಕ್ಕೆ ಇಂದು ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 24ಕ್ಕೇರಿದೆ.

ಕೊರೋನ ಸೋಂಕಿಗೆ ತುತ್ತಾಗಿದ್ದ ಉಳ್ಳಾಲದ ಕೋಡಿಯಲ್ಲಿ ವಾಸ್ತವ್ಯ ಹೊಂದಿದ್ದ 66 ವರ್ಷ ಪ್ರಾಯದ ವ್ಯಕ್ತಿ ಹಾಗೂ ಮುನ್ನೂರು ಗ್ರಾಮದ ಸಂತೋಷ್ ನಗರ ನಿವಾಸಿ 52 ವರ್ಷದ ಪ್ರಾಯದ ವ್ಯಕ್ತಿ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಹರೇಕಳ ಪಾವೂರು ನಿವಾಸಿಯಾಗಿದ್ದ 66 ವರ್ಷ ಪ್ರಾಯದ ಈ ವ್ಯಕ್ತಿಯು ಉಳ್ಳಾಲದ ಕೋಡಿಯಲ್ಲಿ ತನ್ನ ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು. ಉಳ್ಳಾಲ ನಗರಸಭಾದ ಸಾರ್ವಜನಿಕ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಡಿ ಕೆಲಸ ಮಾಡುತ್ತಿದ್ದರು.

ಆರೋಗ್ಯವಾಗಿದ್ದ ಇವರಿಗೆ ವಾರದ ಹಿಂದೆ ಎದೆನೋವು ಕಾಣಿಸಿಕೊಂಡ ಮೇರೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ 19 ಪರೀಕ್ಷೆಯಲ್ಲಿ ಇವರಿಗೆ ಪಾಸಿಟಿವ್ ಬಂದಿತ್ತು. ಹಾಗೇ ಅಲ್ಲೇ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮುನ್ನೂರು ಗ್ರಾಮದ ಸಂತೋಷ್ ನಗರ ನಿವಾಸಿಯಾಗಿದ್ದ 52 ವರ್ಷದ ಪ್ರಾಯದ ವ್ಯಕ್ತಿಯು ನಗರದ ಬಂದರ್ ದಕ್ಕೆಯಲ್ಲಿ ಎಳೆಯ ಪ್ರಾಯದಿಂದಲೇ ಕೆಲಸ ಮಾಡುತ್ತಿದ್ದರು.

ಕೆಲವು ಸಮಯದಿಂದ ಹೃದ್ರೋಗಿಯಾಗಿದ್ದ ಇವರು ವಾರದ ಹಿಂದೆ ಕೆಮ್ಮು-ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಜೂ.30ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೋವಿಡ್ 19 ಪರೀಕ್ಷೆಯಲ್ಲಿ ಇವರಿಗೆ ಪಾಸಿಟಿವ್ ಬಂದಿತ್ತು. ಆ ಬಳಿಕ ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಇವರು ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇಂದು ಕೋವಿಡ್‌ಗೆ ಬಲಿಯಾದ ಇಬ್ಬರು ಕೂಡ ಮಂಗಳೂರು ವಿಧಾನಸಭಾ (ಉಳ್ಳಾಲ) ಕ್ಷೇತ್ರ ವ್ಯಾಪ್ತಿಯವರಾಗಿದ್ದು, ಪುರುಷರೇ ಆಗಿದ್ದಾರೆ. ಇಬ್ಬರ ದಫನ ಕಾರ್ಯವು ಉಳ್ಳಾಲ ಪರಿಸರದಲ್ಲೇ ನಡೆಯಿತು.

ಉಳ್ಳಾಲ ಕೋಡಿಯ ವ್ಯಕ್ತಿಯ ದಫನ ಕಾರ್ಯವನ್ನು ಕೋಡಿ ಮಸೀದಿಯ ವಠಾರದಲ್ಲಿ ನೆರವೇರಿಸಲಾಯಿತು. ತೊಕ್ಕೊಟ್ಟು ಸಮೀಪದ ಮುನ್ನೂರು ಗ್ರಾಮದ ಸಂತೋಷ್ ನಗರ ನಿವಾಸಿಯ ಅಂತ್ಯಕ್ರಿಯೆಯು ಉಳ್ಳಾಲದ ಮುಕ್ಕಚೇರಿಯ ಸಿದ್ದೀಕ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು. ಸ್ಥಳೀಯ ಜಮಾಅತ್ ಸದಸ್ಯರು, ಊರವರು ಸೇರಿ ಅಂತ್ಯಕ್ರಿಯೆಗೆ ಪೂರ್ಣ ವ್ಯವಸ್ಥೆ ಮಾಡಿದ್ದರು.

Comments are closed.