ಕರಾವಳಿ

ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 10 ವೈದ್ಯರಿಗೆ ಸೋಂಕು ದೃಢ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 10 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಇನ್ನೂ ಹಲವು ಮಂದಿ ವೈದ್ಯರು, ದಾದಿಯರು ಸೋಂಕಿಗೆ ತುತ್ತಾಗುವ ಭೀತಿಯೂ ಎದುರಾಗಿದೆ.

ಕೊರೊನಾ ಆಸ್ಪತ್ರೆಯ ಮುಖ್ಯ ವೈದ್ಯರೊಬ್ಬರಿಗೆ ಹಾಗೂ ಕೊರೊನಾ ವಿಭಾಗದ ಮುಖ್ಯಸ್ಥರಿಗೆ ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಮುಖ್ಯ ವೈದ್ಯರು ಸೇರಿದಂತೆ ಕೊರೊನಾ ಆಸ್ಪತ್ರೆಯ ಹಲವು ವೈದ್ಯರಿಗೆ ಕೊರೊನಾ ಪಾಸಿಟಿವ್‌‌ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಸಾಮೂಹಿಕವಾಗಿ ವೈದ್ಯರೂ ಕೊರೋನ ವೈರಸ್ ಗೆ ತುತ್ತಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ರೋಗಿಗಳ ಚಿಕಿತ್ಸೆಯಲ್ಲಿ ಹಗಲಿರುಳು ತೊಡಗಿಕೊಂಡಿದ್ದ ಈ ವೈದ್ಯರಿಗೆ ಪಾಸಿಟಿವ್ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಯ ಅನೇಕ ವೈದ್ಯರು, ದಾದಿಯರು ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲ ಅಪಾಯಗಳ ನಡುವೆಯೂ ಕೋವಿಡ್ ವಾರಿಯರ್‌ಗಳಾಗಿ ಮುಖ್ಯ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೇ ದೊಡ್ಡ ಮಟ್ಟದಲ್ಲಿ ಸೋಂಕಿಗೆ ಈಡಾಗುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಹಿರಿಯ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಪ್ರಮುಖ 2-3 ಖಾಸಗಿ ಆಸ್ಪತ್ರೆ ಸೇರಿದಂತೆ ಒಂದೇ ದಿನ 10 ವೈದ್ಯರಿಗೆ ಸೋಂಕು ಹರಡಿದ್ದು ಕೊರೋನ ವಾರಿಯರ್‌ಗಳಾದ ಇತರ ಸಿಬ್ಬಂದಿಗಳ ಭೀತಿಗೆ ಕಾರಣವಾಗಿದೆ. ಈ ಎಲ್ಲಾ ಆಸ್ಪತ್ರೆಗಳ 50ಕ್ಕೂ ಅಧಿಕ ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Comments are closed.